ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ; ಎಲ್ಲೆಲ್ಲೂ ಸ್ಫೋಟದ ಸದ್ದು
ಮಾಸ್ಕೋ: ನಮಗೆ ಉಕ್ರೇನ್ ಮೇಲೆ ಯುದ್ಧ ಸಾರುವ ಇಚ್ಛೆ ಇಲ್ಲವೇ ಇಲ್ಲ ಎಂದು ಹೇಳುತ್ತಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇಂದು ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಉಕ್ರೇನ್ ಮೇಲೆ ಆಕ್ರಮಣಕ್ಕೆ ಆದೇಶ ನೀಡಿದ್ದಾರೆ. ಈಗಾಗಲೇ ಉಕ್ರೇನ್ನ ನಗರಗಳಲ್ಲಿ ಗುಂಡಿನ ಸದ್ದು ಕೇಳಿಬರುತ್ತಿದೆ.
ಉಕ್ರೇನ್ ಮೇಲೆ ಯುದ್ಧ ಸಾರದಂತೆ ಅಮೆರಿಕ ಮತ್ತು ವಿಶ್ವ ಸಮುದಾಯಗಳು ಎಚ್ಚರಿಕೆ ನೀಡಿದ್ದವು. ಇದರ ನಡುವೆಯೂ ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದೆ. ರಷ್ಯಾದಿಂದ ನಮ್ಮ ದೇಶದ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಆಗಿದ್ದು, ಹಲವೆಡೆ ಸ್ಫೋಟದ ಸದ್ದು ಕೇಳಿಬರುತ್ತಿದೆ ಎಂದು ಉಕ್ರೇನ್ ಹೇಳಿದೆ. ಪುಟಿನ್ ಘೋಷಣೆ ಬೆನ್ನಲ್ಲೇ ಉಕ್ರೇನ್ನ ಹಲವು ನಗರಗಳಲ್ಲಿ ಸ್ಫೋಟಗಳ ಸದ್ದು ಕೇಳಿಸುತ್ತಿದೆ ಎಂದು ವರದಿಯಾಗಿದೆ. ಸೋಮವಾರ, ರಷ್ಯಾ ಸಂಸತ್, ದೇಶದ ಹೊರಗಡೆ ಮಿಲಿಟರಿ ಬಳಕೆಗೆ ಪುಟಿನ್ ಅವರಿಗೆ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ನಿನ್ನೆ, ಪೂರ್ವ ಉಕ್ರೇನ್ನ ಪ್ರದೇಶಗಳ ಬಂಡುಕೋರರು ಉಕ್ರೇನ್ ವಿರುದ್ಧ ರಷ್ಯಾ ಬೆಂಬಲ ಕೋರಿದ್ದಾರೆ ಎಂದು ಪುಟಿನ್ ಹೇಳಿದ್ದರು.