HistoryInternationalNational

ಮಹಾತ್ಮಾಗಾಂಧಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಯಾಕೆ ಕೊಡಲಿಲ್ಲ..?

ನೊಬೆಲ್‌ ಶಾಂತಿ ಪ್ರಶಸ್ತಿ.. ಇದು ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.. ೧೯೦೧ರಲ್ಲಿ ಆಲ್ಫ್ರೆಡ್‌ ನೊಬೆಲ್‌ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ ೧೦ರಂದು ನೀಡಲಾಗುತ್ತದೆ. ರೆಡ್‌ಕ್ರಾಸ್‌ ಸಂಸ್ಥಾಪಕ ಜೀಣ್‌-ಹೆನ್ರಿ ಡ್ಯುನಾಂಟ್‌ ಅವರಿಗೆ ಮೊದಲ ನೊಬೆಲ್‌ ಪ್ರಶಸ್ತಿ ನೀಡಲಾಯಿತು. ಇದುವರೆಗೆ ೧೦೦ ಬಾರಿ ನೊಬೆಲ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಆದರೆ, ನೊಬೆಲ್‌ ಪ್ರಶಸ್ತಿ ಸ್ಥಾಪನೆಯಾದಾಗಿನಿಂದ ೧೯ ಬಾರಿ ಪ್ರಶಸ್ತಿ ಘೋಷಣೆ ಮಾಡಿಲ್ಲ. ೨೭ ಬಾರಿ ವ್ಯಕ್ತಿಗಳಿಗಿಂತ ಸಂಸ್ಥೆಗಳಿಗೇ ಪ್ರಶಸ್ತಿ ನೀಡುವುದು ಸೂಕ್ತವೆಂದು ಭಾವಿಸಿ, ಸಂಸ್ಥೆಗಳಿಗೆ ನೊಬೆಲ್‌ ಪ್ರಶಸ್ತಿಗಳನ್ನು ನೀಡಲಾಯಿತು.

ಪ್ರತಿ ವರ್ಷ ನೊಬೆಲ್‌ ಪ್ರಶಸ್ತಿಗೆ ಹೆಸರು ಪ್ರಕಟವಾಗುವ ಮುಂಚೆ ಹಾಗೂ ಪ್ರಶಸ್ತಿ ಘೋಷಣೆಯಾದ ನಂತರ ಭಾರತದಲ್ಲಿ ಒಂದು ವಿಚಾರ ಸಾಮಾನ್ಯವಾಗಿ ಚರ್ಚೆಯಾಗುತ್ತಿರುತ್ತದೆ. ಆಧುನಿಕಯುಗದಲ್ಲಿ ಶಾಂತಿದೂತರಾಗಿ ದೊಡ್ಡ ಹೆಸರು ಗಳಿಸಿದ ಮಹಾತ್ಮಾಗಾಂಧೀಜಿಯವರಿಗೆ ಯಾಕೆ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗಲಿಲ್ಲ ಎಂದು ಎಲ್ಲರೂ ಮಾತನಾಡುತ್ತಾರೆ. ಆದರೆ ನೊಬೆಲ್‌ ಪ್ರಶಸ್ತಿ ಕಮಿಟಿ ಈ ಬಗ್ಗೆ ಯಾವತ್ತೂ ಒಂದು ಮಾತನ್ನೂ ಆಡಿಲ್ಲ. ಅದರಿಂದಾಗಿ ಎಲ್ಲರಿಗೂ ಇದಕ್ಕೆ ಕಾರಣ ಆಂಗ್ಲರು ಎಂಬ ಭಾವನೆ ಇದೆ.. ಗಾಂಧೀಜಿಗೆ ಈ ಪುರಸ್ಕಾರ ನೀಡಿದರೆ ಆಂಗ್ಲರಿಂದ ತೊಂದರೆಗೊಳಗಾಗಬಹುದು ಎಂಬ ಕಾರಣಕ್ಕಾಗಿ ನೊಬೆಲ್‌ ಕಮಿಟಿ ಗಾಂಧೀಜಿ ಹೆಸರನ್ನು ಪರಿಗಣಿಸುತ್ತಿಲ್ಲ ಎಂಬುದು ಬಹುತೇಕರ ಆರೋಪ.

ನಾಲ್ಕು ಬಾರಿ ನಾಮಿನೇಟ್‌ ಆಗಿದ್ದ ಗಾಂಧೀಜಿ

ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಗಾಂಧೀಜಿ ನಾಲ್ಕು ಬಾರಿ ನಾಮಿನೇಟ್‌ ಆಗಿದ್ದರು. ೧೯೩೭ ಹಾಗೂ ೩೯ರಲ್ಲಿ ಸತತವಾಗಿ ನಾಮಿನೇಟ್‌ ಮಾಡಲಾಗಿತ್ತು. ೧೯೪೭ರಲ್ಲಿ ಕೂಡಾ ಗಾಂಧೀಜಿಯವರು ನೊಬೆಲ್‌ ಪ್ರಶಸ್ತಿಗೆ ನಾಮಿನೇಟ್‌ ಆಗಿದ್ದರು. ಕೊನೆಯದಾಗಿ ೧೯೪೮ರಲ್ಲಿ ಕೂಡಾ ಗಾಂಧೀಜಿ ಹೆಸರನ್ನು ನಾಮಿನೇಟ್‌ ಮಾಡಲಾಗಿತ್ತು. ಆದರೆ ಅದಾದ ನಾಲ್ಕು ದಿನಗಳಲ್ಲೇ ಗಾಂಧೀಜಿ ಹತ್ಯೆ ನಡೆದಿತ್ತು.
ಮೊದಲ ಬಾರಿ ಅಂದರೆ ೧೯೩೭ರಲ್ಲಿ ನಾರ್ವೆ ಸಂಸದರೊಬ್ಬರು ಗಾಂಧೀಜಿ ಹೆಸರನ್ನು ಸೂಚಿಸಿದ್ದರು. ಆದರೆ, ಆಯ್ಕೆ ಸಂದರ್ಭದಲ್ಲಿ ಆಯ್ಕೆ ಕಮಿಟಿ ಗಾಂಧೀಜಿ ಹೆಸರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಆ ಸಮಯದಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಹಲವು ವಿಚಾರಗಳು ಪತ್ತೆಯಾಗಿವೆ. ನೊಬೆಲ್‌ ಆಯ್ಕೆ ಸಮಿತಿಯಲ್ಲಿ ಸಲಹಾದಾರರಾಗಿದ್ದ ಜಾಕಬ್‌ ವಾರ್ಮೂಲರ್‌ ಎಂಬುವವರು ಗಾಂಧೀಜಿಗೆ ನೊಬೆಲ್‌ ಪುರಸ್ಕಾರ ನೀಡುವ ಸಂಬಂಧ ತಮ್ಮ ಅಭಿಪ್ರಾಯವನ್ನು ಈ ರೀತಿ ಬರೆದಿದ್ದಾರೆ. ʻಗಾಂಧೀಜಿ ತಮ್ಮ ಅಹಿಂಸಾ ವಿಧಾನವನ್ನೇ ಮುಂದುವರೆಸಿದರು. ಆಂಗ್ಲರ ವಿರುದ್ಧ ಅವರು ಮಾಡುತ್ತಿದ್ದ ಅಹಿಂಸಾ ಹೋರಾಟ ಮುಂದೊಂದು ದಿನ ಹಿಂಸಾತ್ಮಕವಾಗಿ ಬದಲಾಗಬಹುದು ಎಂದು ಗೊತ್ತಿದ್ದರೂ, ಗಾಂಧೀಜಿಯವರು ಅಹಿಂಸಾ ಹೋರಾಟವನ್ನು ಬಿಡಲಿಲ್ಲ. ಗಾಂಧೀಜಿಯವರ ರಾಷ್ಟ್ರೀಯವಾದ ಭಾರತದಲ್ಲಿನ ಪರಿಸ್ಥಿತಿಗಳಿಗಷ್ಟೇ ಸೀಮಿತವಾಗಲಿಲ್ಲ. ದಕ್ಷಿಣಾಫ್ರಿಕಾದಲ್ಲಿ ಅವರು ಮಾಡಿದ ಹೋರಾಟ ಕೂಡಾ ಭಾರತೀಯರಿಗೆ ಅನುಕೂಲ ಮಾಡಿಕೊಡುವುದೇ ಆಗಿತ್ತು. ಭಾರತೀಯರಿಗಿಂತ ದುರ್ಬಲವಾಗಿ ಜೀವನ ನಡೆಸಿದ ಕಪ್ಪು ವರ್ಣೀಯರಿಗಾಗಿ ಗಾಂಧೀಜಿ ಏನೂ ಮಾಡಲಿಲ್ಲʼ ಎಂಧು ಜಾಕಬ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಮಾರ್ಟಿನ್‌ ಲೂಥರ್‌ ಕಿಂಗ್‌, ನೆಲ್ಸನ್‌ ಮಂಡೇಲಾರಂಥವರು ನೊಬೆಲ್‌ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ʻನಾವು ಗಾಂಧಿ ಮಾರ್ಗದಲ್ಲಿ ನಡೆದೆವು. ಅವರು ಅಹಿಂಸಾ ಹೋರಾಟದಿಂದಲೇ ನಾವು ಸ್ಪೂರ್ತಿ ಪಡೆದೆವುʼ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಗಮನಿಸಿದರೆ ಜಾಕಬ್‌ ಅಭಿಪ್ರಾಯ ಹಾಸ್ಯಾಸ್ಪದ ಎನಿಸುತ್ತದೆ.
ಇನ್ನು ೧೯೪೭ರಲ್ಲಿ ನೊಬೆಲ್‌ ಪ್ರಶಸ್ತಿಗಾಗಿ ಕೇವಲ ೬ ಮಂದಿಯನ್ನು ಮಾತ್ರ ನಾಮಿನೇಟ್‌ ಮಾಡಲಾಗಿತ್ತು, ಅದರಲ್ಲಿ ಮಹಾತ್ಮಾ ಗಾಂಧೀಜಿ ಹೆಸರು ಕೂಡಾ ಇತ್ತು. ಆದರೆ ಆಗಲೂ ಗಾಂಧೀಜಿಗೆ ನೊಬೆಲ್‌ ಪ್ರಶಸ್ತಿ ಸಿಗಲಿಲ್ಲ. ಭಾರತದ ವಿಭಜನೆ ನಂತರ ಗಾಂಧಿ ನೀಡಿದ ಕೆಲ ವಿವಾದಾಸ್ಪದ ವ್ಯಾಖ್ಯೆಗಳಿಂದಾಗಿ ಗಾಂಧೀಜಿಗೆ ನೊಬೆಲ್‌ ಸಿಗಲಿಲ್ಲ ಎಂಬ ಸುದ್ದಿಗಳು ಆಗ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಆ ವರ್ಷ ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುವ ಕ್ವೇಕರ್‌ ಸಂಸ್ಥೆಗೆ ನೊಬೆಲ್‌ ಪ್ರಶಸ್ತಿ ದೊರೆತಿತ್ತು.

ಕ್ವೇಕರ್‌ ಸಂಸ್ಥೆಯೇ ಗಾಂಧಿ ಹೆಸರು ಸೂಚಿಸತ್ತು..!
ಇನ್ನು ೧೯೪೮ರಲ್ಲಿ ಕ್ವೇಕರ್‌ ಸಂಸ್ಥೆಯೇ ನೊಬೆಲ್‌ ಪುರಸ್ಕಾರಕ್ಕಾಗಿ ಮಹಾತ್ಮಾಗಾಂಧೀಜಿ ಹೆಸರನ್ನು ಸೂಚಿಸುತ್ತದೆ. ಆದರೆ ನಾಮಿನೇಷನ್‌ ಅಂತ್ಯಕ್ಕೆ ಎರಡು ದಿನ ಬಾಕಿ ಇರುವಾಗಲೇ ಮಹಾತ್ಮಾಗಾಂಧೀಜಿಯ ಹತ್ಯೆಯಾಗುತ್ತದೆ. ಅಷ್ಟೊತ್ತಿಗಾಗಲೇ ಗಾಂಧೀಜಿಯವರಿಗೇ ನೊಬೆಲ್‌ ಪುರಸ್ಕಾರ ನೀಡಬೇಕೆಂದು ೫ ಮಂದಿ ನಾಮಿನೇಟ್‌ ಮಾಡಿರುತ್ತಾರೆ. ಆದರೂ ನೊಬೆಲ್‌ ಆಯ್ಕೆ ಸಮಿತಿ ಗೊಂದಲಕ್ಕೀಡಾಗುತ್ತದೆ.
ಯಾಕಂದ್ರೆ ಆ ಸಮಯದಲ್ಲಿ ಮರಣೋತ್ತರವಾಗಿ ಯಾರಿಗೂ ನೊಬೆಲ್‌ ಪುರಸ್ಕಾರ ನೀಡುತ್ತಿರಲಿಲ್ಲ. ಆದರೆ ಈಗ ಇಂತಹ ವಿಶೇಷ ಪರಿಸ್ಥಿತಿಗಳಲ್ಲಿ ಮರಣಾನಂತರವೂ ನೊಬೆಲ್‌ ಪ್ರಶಸ್ತಿ ಘೋಷಣೆ ಮಾಡುವ ಅವಕಾಶವಿದೆ. ಆದರೆ ಆಗ ಇರಲಿಲ್ಲವಾದ್ದರಿಂದ ನೊಬೆಲ್‌ ಪ್ರಶಸ್ತಿ ಆಯ್ಕೆ ಸಮಿತಿ ಗೊಂದಲಕ್ಕೀಡಾಗಿತ್ತು. ಅದೇನೆಂದರೆ ಒಂದು ವೇಳೆ ಗಾಂಧೀಜಿಯವರಿಗೆ ನೊಬೆಲ್‌ ಪ್ರಶಸ್ತಿ ನೀಡಿದರೆ, ಪ್ರಶಸ್ತಿಯ ಹಣವನ್ನು ಯಾರಿಗೆ ನೀಡಬೇಕು ಅನ್ನೋದು. ಯಾಕಂದ್ರೆ ಗಾಂಧೀಜಿಯವರು ಯಾವುದೇ ಟ್ರಸ್ಟ್‌ ಆಗಲೀ, ಸಂಘ, ಸಂಸ್ಥೆಯನ್ನಾಗಲೀ ಸ್ಥಾಪಿಸಿರಲಿಲ್ಲ. ಅವರಿಗೆ ಯಾವುದೇ ರೀತಿಯ ಆಸ್ತಿಗಳೂ ಇರಲಿಲ್ಲ. ಇನ್ನು ಆಸ್ತಿಗಳಿಗೆ ಸಂಬಂಧಿಸಿದಂತೆ ಗಾಂಧೀಜಿಯವರು ಯಾವುದೇ ವಿಲ್‌ ಕೂಡಾ ಬರೆದಿಟ್ಟಿರಲಿಲ್ಲ. ಇದು ಕಾನೂನಾತ್ಮಕವಾಗಿ ದೊಡ್ಡ ಸಮಸ್ಯೆ ಏನೂ ಆಗಿರಲಿಲ್ಲ. ಪರಿಷ್ಕರಿಸಲಾಗದ ಸಮಸ್ಯೆಯೂ ಇದಾಗಿರಲಿಲ್ಲ. ಆದರೆ, ಗಾಂಧೀಜಿ ಹೆಸರು ಘೋಷಣೆ ಮಾಡಿ ಇಕ್ಕಟ್ಟಿಗೆ ಸಿಲುಕುವುದು ನೊಬೆಲ್‌ ಪ್ರಶಸ್ತಿ ಆಯ್ಕೆ ಸಮಿತಿಗೆ ಇಷ್ಟವಿರಲಿಲ್ಲ. ಹೀಗಾಗಿ ಆ ವರ್ಷ ಯಾರಿಗೂ ನೊಬೆಲ್‌ ಪ್ರಶಸ್ತಿ ಘೋಷಣೆ ಮಾಡಲಿಲ್ಲ.
ಕೈಜಾರಿದ ಅವಕಾಶ
ಈ ಬಗ್ಗೆ ನೊಬೆಲ್‌ ಪುರಸ್ಕಾರ ಆಯ್ಕೆ ಸಮಿತಿ ತನ್ನ ಅಭಿಪ್ರಾಯವನ್ನು ದಾಖಲಿಸಿದೆ. ಅವರ ಪ್ರಕಾರ, ಗಾಂಧೀಜಿ ಹಠಾತ್ತಾಗಿ ಸಾವನ್ನಪ್ಪದೇ ಇದ್ದಿದ್ದರೆ ೧೯೪೮ರಲ್ಲಿ ಗಾಂಧೀಜಿಯವರಿಗೇ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗುತ್ತಿತ್ತು. ʻನಾಮಿನೇಟ್‌ ಆದವರಲ್ಲಿ ಬದುಕಿರುವ ಯಾವ ಅಭ್ಯರ್ಥಿಯನ್ನೂ ನೊಬೆಲ್‌ ಪುರಸ್ಕಾರಕ್ಕೆ ತಕ್ಕವರೆಂದು ಭಾವಿಸುದಕ್ಕೆ ಆಗುವುದಿಲ್ಲ. ಅದಕ್ಕಾಗಿ ೧೯೪೮ರಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿ ಪ್ರಕಟಿಸಲಿಲ್ಲ.ʼ ಎಂದು ಆಯ್ಕೆ ಸಮಿತಿ ಹೇಳಿತ್ತು. ಈ ಹೇಳಿಕೆಯಲ್ಲಿ ಬದುಕಿರುವವರಲ್ಲಿ ಎಂಬ ಮಾತು ತುಂಬಾನೇ ಮುಖ್ಯವಾಗುತ್ತದೆ. ಇದರ ಆಧಾರದಲ್ಲಿ ಹೇಳುವುದಾದರೆ, ಮರಣಾನಂತರವೂ ನೊಬೆಲ್‌ ಪುರಸ್ಕಾರ ನೀಡುವ ಅವಕಾಶ ಇದ್ದಿದ್ದರೆ, ಅದು ಖಚಿತವಾಗಿಯೂ ಗಾಂಧೀಜಿಯವರಿಗೇ ಸಿಗುತ್ತಿತ್ತೆಂಬುದು ಸ್ಪಷ್ಟವಾಗುತ್ತದೆ. ಆದರೆ ಗಾಂಧೀಜಿಯವರನ್ನು ಇಷ್ಟಪಡುವವರು ಹೇಳೋದು ಏನೆಂದರೆ, ಗಾಂಧೀಜಿ ಯಾವತ್ತೂ ನೊಬೆಲ್‌ ಪುರಸ್ಕಾರ ಬಯಸಲಿಲ್ಲ. ಗಾಂಧೀಜಿಯವರ ಸೇವೆ ಹಾಗೂ ದೊಡ್ಡತನ ನೊಬೆಲ್‌ ಪುರಸ್ಕಾರಕ್ಕಿಂತ ದೊಡ್ಡದು. ನೊಬೆಲ್‌ ಕಮಿಟಿ ಗಾಂಧೀಜಿಗೆ ಶಾಂತಿ ಪುರಸ್ಕಾರ ನೀಡಿದ್ದಿದ್ದರೆ, ಆ ಸಂಸ್ಥೆಯ ಗೌರವವರೇ ಇನ್ನಷ್ಟು ಹೆಚ್ಚಾಗುತ್ತಿತ್ತು. ಆದರೆ, ಇಂತಹ ಅದ್ಭುತವಾದ ಅವಕಾಶವನ್ನು ನೊಬೆಲ್‌ ಸಂಸ್ಥೆ ಕಳೆದುಕೊಳ್ತು.

 

Share Post