ಜಯಲಲಿತಾ ಅವರ ಆಸ್ತಿಗಳ ಹರಾಜಿಗೆ ಕೋರ್ಟ್ ಅನುಮತಿ
ಚೆನ್ನೈ; ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಿಂದ ಜಪ್ತಿ ಮಾಡಲಾದ ಆಸ್ತಿಗಳ ಹರಾಜಿಗೆ ಕೋರ್ಟ್ ಅನುಮತಿ ನೀಡಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಅವರ ನಿವಾಸ ಮೇಲೆ ದಾಳಿ ನಡೆದಿತ್ತು. ಈ ವೇಳೆ ಸಾವಿರಾರು ಸೀರೆಗಳು, ವಾಚ್‌ಗಳು, ಚಿನ್ನಾಭರಣಗಳು ಪತ್ತೆಯಾಗಿದ್ದವು. ಅವುಗಳನ್ನು ಹರಾಜು ಮಾಡಲು ಬೆಂಗಳುರಿನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ.
ದಾಳಿಯಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಕರ್ನಾಟಕ ವಿಧಾನಸಭೆಯ ಖಜಾನೆಯಲ್ಲಿ ಇಡಲಾಗಿತ್ತು. ಅವುಗಳನ್ನು ಮಾರಾಟ ಮಾಡಲು ನಿರ್ದೇಶನ ನೀಡುವಂತೆ ಆರ್‌ಟಿಐ ಕಾರ್ಯಕರ್ತರೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ವಸ್ತುಗಳ ಹರಾಜಿಗೆ ಸೂಚಿಸಿದ್ದಾರೆ.
ಸೂಕ್ತ ಅಧಿಕಾರಿಯನ್ನು ನೇಮಿಸಿ ಹರಾಜು ಪ್ರಕ್ರಿಯೆ ನಡೆಸಬೇಕು. ಬಂದ ಹಣದಲ್ಲಿ ಕರ್ನಾಟಕ ಸರ್ಕಾರ ಖರ್ಚು ಮಾಡಿದ್ದ 5 ಕೋಟಿಯನ್ನು ತನ್ನಲ್ಲೇ ಇಟ್ಟುಕೊಳ್ಳಬೇಕು. ಹಣ ಉಳಿದರೆ ಅದನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ.