ಶ್ರೀಲಂಕಾದಲ್ಲಿ ಹಿಂಸಾಚಾರಕ್ಕೆ ಸಂಸದ ಸೇರಿ ಐದು ಮಂದಿ ಬಲಿ
ಕೊಲಂಬೊ: ಶ್ರೀಲಂಕಾದಲ್ಲಿ ಸರ್ಕಾರದ ಪರ ಮತ್ತು ವಿರೋಧದ ಗದ್ದಲದಿಂದಾಗಿ ಭಾರಿ ಹಿಂಸಾಚಾರ ನಡೆದಿದೆ. ಇದ್ರಲ್ಲಿ ಆಡಳಿತ ಪಕ್ಷದ ಸಂಸದ ಸೇರಿದಂತೆ ಐವರು ದಾರುಣ ಸಾವನ್ನಪ್ಪಿದ್ದಾರೆ. ಹಿಂಸಾಚಾರಕ್ಕೆ ಸುಮಾರು 200 ಮಂದಿ ಗಾಯಗೊಂಡಿದ್ದು, ತೀವ್ರವಾಗಿ ಗಾಯಗೊಂಡಿರುವ 181 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀಲಂಕಾದ ಪೊಲನ್ನರುವಾ ಜಿಲ್ಲೆಯ ವೀರಕೇತಿಯಾ ಪಟ್ಟಣದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಎಸ್ಎಲ್‌ಪಿಪಿ ಸಂಸದ ಅಮರಕೀರ್ತಿ ಅತುಲಕೊರಲಾ(57) ಅವರ ಕಾರನ್ನು ಗುಂಪೊಂದು ಸುತ್ತುವರಿಯಿತು. ಈ ವೇಳೆ ಎಸ್‌ಯುವಿ ಕಾರಿನಿಂದ ಗುಂಡು ಹಾರಿದ ಸದ್ದು ಕೇಳಿತು. ಆಕ್ರೋಶಗೊಂಡ ಪ್ರತಿಭಟನಾಕಾರರು ಕಾರನ್ನು ಪಲ್ಟಿ ಮಾಡಿದ್ದಾರೆ. ಪರಿಸ್ಥಿತಿಯನ್ನು ಅರಿತ ಸಂಸದ ಕಾರಿನಿಂದ ಇಳಿದು ಸಮೀಪದ ಕಟ್ಟಡವೊಂದರಲ್ಲಿ ಅವಿತುಕೊಂಡಿದ್ದರು. ಸಾವಿರಾರು ಪ್ರತಿಭಟನಾಕಾರರು ಕಟ್ಟಡವನ್ನು ಸುತ್ತುವರಿದಾಗ ಸಂಸದ ಇಬ್ಬರ ಮೇಲೆ ಗುಂಡು ಹಾರಿಸಿದರು. ಈ ವೇಳೆ 27 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಬಳಿಕ ಸಂಸದ ಅಮರಕೀರ್ತಿ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ ಆಡಳಿತ ಪಕ್ಷದ ರಾಜಕಾರಣಿಯೊಬ್ಬರು ಸರ್ಕಾರದ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.