Health

ಎಲ್ಲರಿಗೂ ಮಾನಸಿಕ ಆರೋಗ್ಯದ ತಪಾಸಣೆ ಅಗತ್ಯ; ಡಾ.ಕೆ.ಸುಧಾಕರ್‌

ಬೆಂಗಳೂರು: ದೇಶದಲ್ಲೇ‌ ಮೊದಲ ಬಾರಿಗೆ ನಿಮ್ಹಾನ್ಸ್ ಸಂಸ್ಥೆಯು ನೀತಿ ಆಯೋಗ ಹಾಗೂ ಆರೋಗ್ಯ ಇಲಾಖೆಯ ನೆರವಿನಲ್ಲಿ ‘ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮ’ ಜಾರಿ ಮಾಡಿದ್ದು, ಇದಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ವರ್ಚುವಲ್ ಚಾಲನೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಧಾಕರ್‌, ಕೋವಿಡ್ ಸಂದರ್ಭದಲ್ಲಿ ನಿಮ್ಹಾನ್ಸ್ ನೇತೃತ್ವದಲ್ಲಿ, ಅನೇಕ ಕೊರೊನಾ ರೋಗಿ ಹಾಗೂ ಕುಟುಂಬದವರ ಮಾನಸಿಕ ಆರೋಗ್ಯ ನಿರ್ವಹಣೆಗೆ ಒತ್ತು ನೀಡಲಾಯಿತು. ಕೆಲ ಪ್ರಕರಣಗಳಲ್ಲಿ ಆತ್ಮಹತ್ಯೆಯ ಘಟನೆಗಳೂ ನಡೆದವು. ಆ ವೇಳೆ ಅನೇಕರಿಗೆ ಮಾನಸಿಕ ಆರೋಗ್ಯ ಆಪ್ತ ಸಮಾಲೋಚನೆ ಸೇವೆ ನೀಡಲಾಯಿತು. ಇದನ್ನು ಇನ್ನಷ್ಟು ಮುಂದುವರಿಸಲಾಗುತ್ತಿದೆ. ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶ. ಮೆದುಳಿನ ಆರೋಗ್ಯ ಇಡೀ ದೇಹದ ಒಟ್ಟು ಆರೋಗ್ಯ ಕಾಪಾಡಲು ಅಗತ್ಯವಾಗಿದೆ. ನಿಮ್ಹಾನ್ಸ್, ಜನರ ಬಳಿಯೇ ಹೋಗಿ ಆರೋಗ್ಯ ಸೇವೆ ನೀಡುವಂತಹ ಪ್ರತಿಷ್ಠಿತ ಸಂಸ್ಥೆಯಾಗಿದೆ. ಸಾಮಾನ್ಯ ಫಿಸಿಷಿಯನ್ ಕೂಡ ಮಾನಸಿಕ ಆರೋಗ್ಯ ಸೇವೆ ನೀಡುವಂತೆ ನಿಮ್ಹಾನ್ಸ್ ತರಬೇತಿ ನೀಡಲಿದೆ ಎಂದರು.

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಮ್ಹಾನ್ಸ್ ನಿಂದ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಮಾನಸಿಕ ರೋಗಗಳ ತಪಾಸಣೆ ಮಾಡುವ ಹಾಗೂ ಚಿಕಿತ್ಸೆ ನೀಡುವ ಕುರಿತು ವೈದ್ಯರಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ರೋಗಿಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ.

Share Post