BengaluruHealth

ಸಾಲುಮರದ ತಿಮ್ಮಕ್ಕನ ಆರೋಗ್ಯದಲ್ಲಿ ಏರುಪೇರು; ಖಾಸಗಿ ಆಸ್ಪತ್ರೆಗೆ ದಾಖಲು

ಬೆಂಗಳೂರು; ಸಾಲುಮರದ ತಿಮ್ಮಕ್ಕನ ಆರೋಗ್ಯದಲ್ಲಿ ಏರುಪೇರಾಗಿದೆ. ಹಾಸನದ ಬೇಲೂರಿನಲ್ಲಿ ವಾಸವಿದ್ದ ಸಾಲುಮರದ ತಿಮ್ಮಕ್ಕಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ದತ್ತುಪುತ್ರ ಉಮೇಶ್‌, ಸಾಲುಮರದ ತಿಮ್ಮಕ್ಕ ಅವರನ್ನು ಬೆಂಗಳೂರಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಡಾ.ರವೀಂದ್ರ ಮೆಹ್ತಾ ಅವರ ತಂಡ ಸಾಲುಮರದ ತಿಮ್ಮಕ್ಕ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿದುಬಂದಿದೆ. ಬೇಲೂರು ಭಾಗದಲ್ಲಿ ಚಳಿ ಹೆಚ್ಚಿದ್ದರಿಂದ ತಿಮ್ಮಕ್ಕ ಅವರಿಗೆ ಶೀತ ಜಾಸ್ತಿಯಾಗಿದೆ. ಮೂರು ದಿನಗಳಿಂದ ಉಸಿರಾಟದ ತೊಂದರೆ ಕೂಡಾ ಅನುಭವಿಸುತ್ತಿದ್ದರು. ಹೀಗಾಗಿ, ಅವರಿಗೆ ಬೇಲೂರು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿತ್ತು. ಆದರೂ ಗುಣಮುಖರಾಗಲಿಲ್ಲ. ಉಸಿರಾಟದ ತೊಂದರೆ ಇನ್ನೂ ಹೆಚ್ಚಾಯಿತು. ಹೀಗಾಗಿ ಬೆಂಗಳೂರಿಗೆ ಕರೆತಂದಿದ್ದೇವೆ ಎಂದು ಸಾಲುಮರದ ತಿಮ್ಮಕ್ಕ ಅವರ ದತ್ತು ಪುತ್ರ ಬಳ್ಳೂರು ಉಮೇಶ್‌ ಹೇಳಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರು ಕೆಲ ದಿನಗಳ ಹಿಂದೆ ಬೆಂಗಳೂರಿನ ನಿವಾಸದಲ್ಲಿ ಕಾಲುಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟಾಗಿತ್ತು. ಹೀಗಾಗಿ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಅವರು ಬೇಲೂರು ತಾಲ್ಲೂಕಿನ ಬಳ್ಳೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

Share Post