Health

ಬೂಸ್ಟರ್‌ ಡೋಸ್‌ ಪಡೆದ‌ ಸಚಿವ ಬಿ ಸಿ ಪಾಟೀಲ್

ಹಾವೇರಿ : ಇಂದಿನಿಂದ ಎಲ್ಲೆಡೆ ಬೂಸ್ಟರ್‌ ಡೋಸ್‌ ಲಸಿಕೆ ಅಭಿಯಾನ ಶುರುವಾಗಿದೆ. ಮೊದಲ ಹಂತವಾಗಿ, ಕೇಂದ್ರ ಸರ್ಕಾರದ ಸೂಚನೆಯಂತೆ ಆರೋಗ್ಯ ಕಾರ್ಯಕರ್ತರಿಗೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರು ಹಾವೇರಿಯ ಆರೋಗ್ಯ ಕೇಂದ್ರಕ್ಕೆ ತೆರಳಿ ಬೂಸ್ಟರ್‌ ಡೋಸ್‌ ಪಡೆದಿದ್ದಾರೆ.

ಬಿ ಸಿ ಪಾಟೀಲ್‌ ಅವರಿಗೆ 60 ವರ್ಷ ತುಂಬಿರುವ ಕಾರಣ ಅವರು ಹಾವೇರಿಯ ಹಿರೇಕೆರೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಂಡ ಬಳಿಕ ಮಾತನಾಡಿದ ಸಚಿವರು, ದೇಶಾದ್ಯಂತ ಬೂಸ್ಟರ್‌ ಡೋಸ್‌ಗೆ ಇಂದು ಚಾಲನೆ ಸಿಕ್ಕಿದೆ. ಈ ಬೂಸ್ಟರ್‌ ಡೋಸ್‌ ತೆಗೆದುಕೊಳ್ಳುವುದರಿಂದ ಓಮಿಕ್ರಾನ್‌ ವಿರುದ್ಧ ಶೇ.88ರಷ್ಟು ರಕ್ಷಣೆ ನೀಡಲಿದೆ ಎಂದು ಯುಕೆ ಅಧ್ಯಯನವು ಹೇಳಿದೆ, ಇನ್ನು ಬೂಸ್ಟರ್‌ ಡೋಸ್‌ ಆಗಿ ನೀವು ಮಿಕ್ಸ್‌ ಡೋಸ್‌ ಹಾಕಿಸುವಂತಿಲ್ಲ. ಮೊದಲು ಯಾವ ಲಸಿಕೆ ಪಡೆದಿದ್ದೀರೋ ಅದೇ ಲಸಿಕೆಯನ್ನು ಹಾಕಿಸಬೇಕು. ಕೋವ್ಯಾಕ್ಸಿನ್‌  ಅಥವಾ ಕೋವಿಶೀಲ್ಡ್‌, ಈ ಎರಡರಲ್ಲಿ ನೀವು ಯಾವುದನ್ನು ಹಾಕಿಸಿರುವಿರೋ ಅದನ್ನೇ ಹಾಕಿಸಬೇಕು ಎಂದು ತಿಳಿಸಿದರು.

ಕಳೆದ ಬಾರಿ ಮನೆಯಲ್ಲಿಯೇ ಲಸಿಕೆ ಹಾಕಿಸಿಕೊಂಡು ವ್ಯಾಪಕ ಟೀಕೆಗೆ ಒಳಗಾಗಿದ್ದ ಬಿ ಸಿ ಪಾಟೀಲ್‌ ಅವರು ಇಂದು ಆರೋಗ್ಯ ಕೇಂದ್ರಕ್ಕೇ ಬಂದು ಲಸಿಕೆ ಹಾಕಿಸಿ ಜನರಿಗೆ ಮಾದರಿ ಆಗಿದ್ದಾರೆ.

Share Post