HealthLifestyle

Ajinomoto; ರುಚಿಗಾಗಿ ಫಾಸ್ಟ್‌ ಫುಡ್‌ನಲ್ಲಿ ಬಳಸೋ ಅಜಿನಿಮೋಟೋ ಎಷ್ಟೊಂದು ಡೇಂಜರ್‌ ಗೊತ್ತಾ..?

ಫಾಸ್ಟ್‌ ಫುಡ್‌ ಇಷ್ಟಪಡೋರ ಸಂಖ್ಯೆ ದೊಡ್ಡದಿದೆ.. ಇದಕ್ಕೆ ಕಾರಣ ಅದರ ಟೇಸ್ಟ್‌.. ಇಲ್ಲಿ ಟೇಸ್ಟ್‌ ಚೆನ್ನಾಗಿರಲೆಂದು ಅಜಿನೋಮೋಟೋ ಬಳಸಲಾಗುತ್ತದೆ.. ಇದರಿಂದಾಗಿ ಆಹಾರಕ್ಕೆ ರುಚಿ ಬರೋದು.. ಆಹಾರವೇನೋ ರುಚಿಯಾಗಿರುತ್ತೆ.. ಆದ್ರೆ ನಮ್ಮ ಆರೋಗ್ಯಕ್ಕೆ ಹಾನಿಯಂತೂ ಕಟ್ಟಿಟ್ಟ ಬುತ್ತಿ..

ಅಜಿನೋಮೋಟೋ ವನ್ನು ಚೀನಾ ಉಪ್ಪು ಅಂತಾನೂ ಕರೀತಾರೆ.. ಅಜಿನೊಮೊಟೊವನ್ನು ಅನೇಕ ಅಡುಗೆಗಳಲ್ಲಿ ರುಚಿಗಾಗಿ ಹಾಗೂ ಸುವಾಸನೆಗಾಗಿ ಎಲ್ಲಾ ಕಡೆ ಬಳಸಲಾಗುತ್ತದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಈ ಉಪ್ಪನ್ನು ಭಾರತದಲ್ಲಿ ಕೂಡಾ ಈಗ ಯಥೇಚ್ಛವಾಗಿ ಬಳಸಲಾಗುತ್ತಿದೆ..  ಹೊರಗೆ ಲಭ್ಯವಿರುವ ಫಾಸ್ಟ್‌ ಫುಡ್‌ಗಳಲ್ಲಿ  ಇದನ್ನು ಹೆಚ್ಚಾಗಿ ಬಳಸುತ್ತಾರೆ.. ಈ ಆಹಾರಗಳಿಗೆ ಹೆಚ್ಚು ರುಚಿಯನ್ನು ನೀಡಲು ಅಜಿನೋಮೋಟವನ್ನು ಬಳಸಲಾಗುತ್ತದೆ.. ಇತ್ತೀಚೆಗೆ ಮಹಿಳೆಯರು ಇದನ್ನು ಮನೆಗಳಲ್ಲೂ ಬಳಸೋದಕ್ಕೆ ಶುರು ಮಾಡಿದ್ದಾರೆ.. ಆದ್ರೆ ಇದರ ಅತಿಯಾದ ಬಳಕೆಯಿಂದ ಗಂಭೀರ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅಂತ ತಜ್ಞರು ಹೇಳುತ್ತಿದ್ದಾರೆ..

ಏನಿದು ಅಜಿನೊಮೊಟೊ?, ಯಾಕೆ ಆರೋಗ್ಯಕ್ಕೆ ಕೆಟ್ಟದ್ದು..?

ಅಜಿನೊಮೊಟೊ ಅನ್ನೋದು ಒಂದು ಬಗೆಯ ರಾಸಾಯನಿಕ.. ಇದನ್ನು MSG ಎಂದೂ ಕರೆಯುತ್ತಾರೆ. ಅಂದರೆ ಮೊನೊಸೋಡಿಯಂ ಗ್ಲುಟಮೇಟ್. ಇದು ಪ್ರೋಟೀನ್‌ನ ಭಾಗವಾಗಿದ್ದು, ಇದನ್ನು ಅಮೈನೋ ಆಮ್ಲ ಎಂದೂ ಕರೆಯುತ್ತಾರೆ. ಅಜಿನೊಮೊಟೊವನ್ನು 1909 ರಲ್ಲಿ ಜಪಾನಿನ ವಿಜ್ಞಾನಿ ಕಿಕುನಾವೊ ಅಕೆಡಾ ಕಂಡುಹಿಡಿದನು.

ಯಾವ ಆಹಾರದಲ್ಲಿ ಇದನ್ನು ಬಳಸುತ್ತಾರೆ?

ಫಾಸ್ಟ್‌ಫುಡ್‌ಗಳ ತಯಾರಿಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.. ಹೀಗಾಗಿಯೇ ಈ ಆಹಾರಗಳು ಸುವಾಸನೆಯಿಂದ ಹಾಗೂ ರುಚಿಯಾಗಿರುತ್ತವೆ..  ನೂಡಲ್ಸ್, ಫ್ರೈಡ್ ರೈಸ್, ಮಂಚೂರಿಯನ್, ಸೂಪ್ ಖಾದ್ಯಗಳಂತಹ ಅನೇಕ ಚೈನೀಸ್ ಖಾದ್ಯಗಳಲ್ಲಿ ಅಜಿನೊಮೊಟೊವನ್ನು ಬಳಸಲಾಗುತ್ತದೆ. ಅಲ್ಲದೆ, ಇದನ್ನು ಪಿಜ್ಜಾ, ಬರ್ಗರ್, ಮ್ಯಾಗಿ ಮಸಾಲಾಗಳು, ಜಂಕ್ ಫುಡ್, ಟೊಮೆಟೊ ಸಾಸ್, ಸೋಯಾ ಸಾಸ್, ಚಿಪ್ಸ್‌ಗಳಲ್ಲಿ ಬಳಸಲಾಗುತ್ತದೆ.

ನರಮಂಡಲದ ಮೇಲೆ ಪರಿಣಾಮ?

ಚೈನೀಸ್ ಪಾಕಪದ್ಧತಿಯಲ್ಲಿ ಬಳಸುವ ಅಜಿನೊಮೊಟೊ, ನರಮಂಡಲದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಲ್ಲಿರುವ ಗ್ಲುಟಾಮಿಕ್ ಆಮ್ಲ ಮೆದುಳಿನಲ್ಲಿ ನರಪ್ರೇಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹದಲ್ಲಿ ಹೆಚ್ಚು ಇದ್ದರೆ, ಅದು ಮೆದುಳಿಗೆ ಅಪಾಯಕಾರಿ ಎಂದು ಹೇಳಲಾಗುತ್ತದೆ.. ಹೀಗಾಗಿ ಇದನ್ನು ಹೆಚ್ಚಾಗಿ ಬಳಸೋದು ಅಪಾಯಕಾರಿ ಎಂದು ಹೇಳಲಾಗುತ್ತದೆ..

ಹೆಚ್ಚಾಗಿ ಬಳಸಿದರೆ ತೂಕ ಹೆಚ್ಚಳ!

ಇಂದು ಅನೇಕ ಜನರು ಜಂಕ್ ಫುಡ್ ತಿನ್ನಲು ಇಷ್ಟಪಡುತ್ತಿದ್ದು, ನಗರವಾಸಿಗಳ ಆಹಾರಪದ್ಧತಿ ತುಂಬಾನೇ ಬದಲಾಗಿದೆ. ಜಂಕ್‌ಫುಡ್‌ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.. ಅದ್ರಲ್ಲೂ ಕೂಡಾ  ಆಹಾರಗಳ ಪರಿಮಳವನ್ನು ಹೆಚ್ಚಿಸಲು ಅಜಿನೊಮೊಟೊವನ್ನು ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಜಿನೊಮೊಟೊ ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ಇದು ಪದೇ ಪದೇ ತಿನ್ನುವುದರಿಂದ ನಿಮ್ಮ ತೂಕ ಹೆಚ್ಚಾಗಲಿದೆ.. ಹೀಗಾಗಿಯೇ ನಗರ ಪ್ರದೇಶದ ಜನರು ಸ್ಥೂಲಕಾಯ ಸಮಸ್ಯೆಯಿಂದ ಹೆಚ್ಚಾಗಿ ಬಳಲುತ್ತಿದ್ದಾರೆ..

ಗರ್ಭಿಣಿಯರಿಗೆ ಅಪಾಯ ಹೆಚ್ಚು

ಗರ್ಭಿಣಿಯರು ಎಂದಿಗೂ ಚೈನೀಸ್ ಆಹಾರವನ್ನು ಸೇವಿಸಬಾರದು. ಇದಕ್ಕೆ ಮುಖ್ಯ ಕಾರಣ ಅಜಿನೊಮೊಟೊ. ಏಕೆಂದರೆ ಇದರಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಹೆಚ್ಚು ಸೋಡಿಯಂ ತಿನ್ನುವುದು ಸರಿಯಲ್ಲ.. ಇದು ಹೊಟ್ಟೆಯಲ್ಲಿರುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ.

ಅಧಿಕ ರಕ್ತದೊತ್ತಡ ಸಮಸ್ಯೆ

ಚೈನೀಸ್ ಆಹಾರದಲ್ಲಿ ಅಜಿನೊಮೊಟೊ ರಕ್ತದೊತ್ತಡದ ಸಮಸ್ಯೆಯನ್ನು ಉಂಟುಮಾಡಬಹುದು. ಬಹುಶಃ, ನೀವು ಈಗಾಗಲೇ ಅಧಿಕ ರಕ್ತದೊತ್ತಡ ರೋಗಿಗಳಾಗಿದ್ದರೆ, ಅಜಿನೊಮೊಟೊ ಆಹಾರವನ್ನು ಸೇವಿಸಬೇಡಿ. ಇದು ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ನಿಮಗೆ ನಿದ್ರೆಯ ಸಮಸ್ಯೆಗಳಿದ್ದರೆ, ಮೈಗ್ರೇನ್ ಇದ್ದರೆ ಅದಕ್ಕೆ ಅಜಿನೊಮೊಟೊ ಪ್ರಮುಖ ಕಾರಣವಾಗಬಹುದು. ಇದು ನಿದ್ರಾಹೀನತೆ ಮತ್ತು ತೀವ್ರ ತಲೆನೋವು ಉಂಟುಮಾಡುತ್ತದೆ. ಹಾಗೆಯೇ ಅಜಿನೊಮೊಟೊ ಬಳಸಿರುವ ಆಹಾರ ಸೇವಿಸುವುದರಿಂದ ದಿನವಿಡೀ ದಣಿವುಂಟಾಗುತ್ತದೆ.

Share Post