Economy

Money tips; ಹಣವನ್ನು ಪಳಗಿಸೋದು ಗೊತ್ತಿದ್ರೆ ಕಷ್ಟವೇ ಇರೋದಿಲ್ಲ!

ಪ್ರತಿಯೊಬ್ಬರಿಗೂ ಇರೋ ಸಮಸ್ಯೆ ಅಂದ್ರೆ ಅದು ಹಣ.. ಹಣವನ್ನು ಸಮಪರ್ಕವಾಗಿ ನಿಭಾಯಿಸೋ ಶಕ್ತಿ ಇರುವವರು ಎಂದಿಗೂ ಸಂಕಷ್ಟಕ್ಕೆ ಸಿಲುಕೋದಿಲ್ಲ. ಹಣ ಅನ್ನೋದು ಒಂದು ಕಾಗದ ಅಷ್ಟೇ.. ಅದಕ್ಕೆ ನಾವು ಒಂದು ಬೆಲೆ ನಿಗದಿ ಮಾಡಿದ್ದೇವೆ.. ಈ ಹಣ ಎಂಬ ನಾವೇ ತಯಾರಿಸಿರುವ ವಸ್ತುವಿನ ಗುಲಾಮತನದಿಂದ ದೂರವಾಗುವುದು ಹೇಗೆ..? ಹಣವನ್ನು ಪಳಗಿಸಿ, ನಾವು ಹೇಳಿದಂತೆ ಕೇಳುವಂತೆ ಮಾಡಿಕೊಳ್ಳುವುದು ಹೇಗೆ..? ನೋಡೋಣ ಬನ್ನಿ..
ಹಣ ಸಮಸ್ಯೆ ಅಲ್ಲ.. ಅದು ಒಂದು ಅವಶ್ಯಕತೆ..
ಮನುಷ್ಯನ ಬದುಕು ನಡೆಯುತ್ತಿರುವುದೇ ಹಣದ ಮೇಲೆ. ಹಣ ಇಲ್ಲದೆ ಏನೂ ಮಾಡೋದಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿ ಮನುಷ್ಯ ಇದ್ದಾನೆ. ಹಣದ ಕಾರಣಕ್ಕಾಗಿ ಸರ್ಕಾರಗಳೇ ಬಿದ್ದು ಹೋಗುತ್ತಿವೆ. ದೇಶಗಳೇ ಮಕಾಡೆ ಮಲಗುತ್ತಿವೆ. ಹಣದ ಕಾರಣಕ್ಕಾಗಿ ಕುಟುಂಬಗಳಲ್ಲಿ ಮನಸ್ತಾಪಗಳಾಗುತ್ತಿವೆ. ಹಣದ ಕಾರಣಕ್ಕಾಗಿ ಮನುಷ್ಯ ಪ್ರಾಣವನ್ನೇ ತೆಗೆದುಕೊಳ್ಳುತ್ತಿದ್ದಾನೆ. ಅಂದಹಾಗೆ, ಮನುಷ್ಯನೇ ಸೃಷ್ಟಿಸಿದ ಹಣಕ್ಕೆ ಮನುಷ್ಯನೇ ಪ್ರಾಣ ಕೊಡುವುದು ಅಂದರೆ ತಮಾಷೆಯಾಗಿ ಕಾಣುವುದಿಲ್ಲವೇ..?  ನಿಜ ಹೇಳಬೇಕೆಂದರೆ ನಮ್ಮ ಬದುಕಿನಲ್ಲಿ ಹಣ ಎಂಬುದು ಒಂದು ಸಮಸ್ಯೆಯೇ ಅಲ್ಲ. ಅದು ಒಂದು ಅವಶ್ಯಕತೆ. ನಮ್ಮ ಅವಶ್ಯಕತೆಗಳನ್ನು ಹೇಗೆ ಸೃಷ್ಟಿಸಿಕೊಳ್ಳುತ್ತೇವೆಯೇ ಹಾಗೆ ಹಣವನ್ನು ನಾವು ಕಟ್ಟಿಹಾಕಬಲ್ಲೆವು. ಹಣವನ್ನು ಪಳಗಿಸುವ ಕಲೆ ಕಲಿತವನು ಮಾತ್ರ ಇಲ್ಲಿ ಬದಕುತ್ತಾನೆ.
ನಾವೇ ಸೃಷ್ಟಿ ಮಾಡಿದ ಹಣವನ್ನು ಪಳಗಿಸೋದು ಹೇಗೆ..?
ಕಾಗದ.. ಇದಕ್ಕೆ ನಾನಾ ರೂಪಗಳು.. ನಾವು ಅದನ್ನು ಹೇಗೆ ಬಳಸುತ್ತೇವೋ, ಅದರ ಮೌಲ್ಯ ಕೂಡಾ ಬದಲಾಗುತ್ತಾ ಹೋಗುತ್ತದೆ.. ಕಾಗದವನ್ನು ಪೊಟ್ಟಣ ಕಟ್ಟಲು ಬಳಸಿದರೆ ಅದರ ಆಯಸ್ಸು ಅಷ್ಟಕ್ಕೇ ಮುಗಿದುಹೋಗುತ್ತದೆ. ದಿನಪತ್ರಿಕೆ ಮುದ್ರಿಸಲು ಬಳಸಿದರೆ ಅದರ ಮೌಲ್ಯ ಒಂದೇ ದಿನ ಮಾತ್ರ. ಅದೇ ಕಾಗದ ಶಾಲೆಯೊಂದರ ಪಠ್ಯ ಪುಸ್ತಕವಾದರೆ ಒಂದು ವರ್ಷ ಅದು ಜೋಪಾನವಾಗಿರುತ್ತದೆ. ಒಂದು ಕಾದಂಬರಿಯೋ ಅಥವಾ ಬೇರೆ ಯಾವುದೋ ವಿಧದ ಪುಸ್ತಕವೋ ಆದರೆ, ಅದನ್ನು ಓದಿ ಮುಗಿಸುವವರೆಗೂ ಅದು ಅವನಿಗೆ ಮೌಲ್ಯಯುತ. ಅದೇ ಕಾಗದ ಹಣದ ರೂಪದಲ್ಲಿ ಮುದ್ರಣವಾದರೆ ಅದರ ತಾಕತ್ತೇ ಬೇರೆಯಾಗಿಬಿಡುತ್ತದೆ.
ಕಾಗದಕ್ಕೆ ಮೌಲ್ಯ ಕೊಟ್ಟಿದ್ದು ಮನುಷ್ಯನೇ ತಾನೇ..?
ಹಣವಾಗುವ ಕಾಗದ ದೇವತಾ ರೂಪ ತಾಳುತ್ತದೆ.. ಮನುಷ್ಯ ಅದನ್ನು ಲಕ್ಷ್ಮೀ ಎಂಬಂತೆ ಪೂಜೆ ಮಾಡುತ್ತಾನೆ… ಅತ್ಯಂತ ಸುರಕ್ಷಿತವಾಗಿ ಅದನ್ನು ಜೋಪಾನವಾಗಿಡುತ್ತಾನೆ. ಹೀಗಾಗಿ ಈ ಹಣವೆಂಬ ಲಕ್ಷ್ಮೀ ಮನುಷ್ಯನನ್ನೇ ಆಳುತ್ತಿದ್ದಾಳೆ.. ಮನುಷ್ಯನ ಇಡೀ ಜೀವ ಹಾಗೂ ಜೀವನ ಆ ಹಣವೆಂಬ ಕಾಗದ ಮೇಲೆಯೇ ನಿಂತಿದೆ.. ಅದು ಮನುಷ್ಯನ ಬಳಿ ಇದ್ದರೆ, ಆತನಲ್ಲಿ ನಗು ತರಿಸುತ್ತದೆ.. ಹೆಚ್ಚಾದರೆ ನೋವನ್ನೂ ತರಿಸುತ್ತದೆ.. ಹಣವನ್ನು ಮನುಷ್ಯನೇ ರೂಪಿಸಿದ್ದಾದರೂ, ಅದು ಮನುಷ್ಯನಿಗಿಂತ ಬೆಲೆ ಬಾಳುವಂತಹದ್ದು. ಹಣಕ್ಕಾಗಿ ಪ್ರಾಣವನ್ನೇ ತೆಗೆಯುವವರಿದ್ದಾರೆ.. ಹಣ ಸಿಗುತ್ತದೆ ಅಂದರೆ ಸಂಬಂಧಗಳನ್ನೇ ದೂರ ಮಾಡಿಕೊಳ್ಳುವವರಿದ್ದಾರೆ.. ಅದಕ್ಕಾಗಿಯೇ ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಸೃಷ್ಟಿಯಾಗಿರೋದು..
ಕಾಗದವನ್ನು ಸೃಷ್ಟಿಸಿದ್ದು, ಅದಕ್ಕೆ ನಾನಾ ಅವತಾರಗಳನ್ನು ನೀಡಿದ್ದು ಮನುಷ್ಯನೇ… ಕಾಗದದ ಬೇರೆಲ್ಲಾ ಅವತಾರಗಳೂ ಇನ್ನೂ ಮನುಷ್ಯನ ನಿಯಂತ್ರಣದಲ್ಲಿಯೇ ಇವೆ… ಹಣವೆಂಬ ಲಕ್ಷ್ಮಿ ಅವತಾರ ಮಾತ್ರ ಮನುಷ್ಯನ ಮೇಲೆ ಸವಾರಿ ಮಾಡುತ್ತಿದೆ.. ಅಂದರೆ ಸೃಷ್ಟಿಕರ್ತನನ್ನೇ ಅದು ಪಳಗಿಸಿಬಿಟ್ಟಿದೆ.. ತನ್ನ ಗುಲಾಮನನ್ನಾಗಿ ಮಾಡಿಕೊಂಡಿದೆ.. ಹಣವೊಂದಿದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಪಡೆಯಬಹುದು ಎಂಬ ಮಾತೊಂದಿದೆ.. ಮನುಷ್ಯ ಈ ಹಣದ ಹಿಂದೆ ಬಿದ್ದಿರುವುದನ್ನು ನೋಡಿದರೆ ಈ ಮಾತು ನಿಜ ಎನಿಸುತ್ತದೆ. ನೀವು ರಜನಿಕಾಂತ್‌ಅವರ ರೋಬೋ ಸಿನಿಮಾ ನೋಡಿರಬಹುದು. ಅದರಲ್ಲಿ ರಜನಿಕಾಂತ್‌ಅವರದೇ ತದ್ರೂಪು ರೋಬೋವನ್ನು ತಯಾರಿಸುತ್ತಾರೆ. ಅದು ಕೊನೆಗೆ ತಯಾರಿಸಿದವರನ್ನೇ ನಿಯಂತ್ರಿಸಲು ಹೊರಡುತ್ತದೆ. ಅವರ ಮೇಲೆಯೇ ಸವಾರಿ ಮಾಡುತ್ತದೆ. ಆದ್ರೆ ರಜನಿಕಾಂತ್‌ಆ ರೋಬೋವನ್ನು ನಿಯಂತ್ರಣಕ್ಕೆ ತರುತ್ತಾರೆ. ಮನುಷ್ಯನಿಗೆ ಎಲ್ಲವೂ ಸಾಧ್ಯ ಎಂದು ಹೇಳೋದಕ್ಕೆ ಈ ಚಿತ್ರದ ಕಥೆ ಉದಾಹರಣೆಯಾಗುತ್ತದೆ.
ಆನೆಯನ್ನೇ ಪಳಗಿಸುವ ಮನುಷ್ಯನಿಗೆ ಹಣ ಪಳಗಿಸೋದು ಕಷ್ಟವೇ..?
ಮನುಷ್ಯ ಭಾರೀ ಗಾತ್ರದ ಆನೆಯನ್ನು ಪಳಗಿಸುತ್ತಾನೆ… ಹುಲಿ, ಸಿಂಹಗಳಂತ ಮೃಗಗಳನ್ನು ಕೂಡಾ ಬೋನಿನಲ್ಲಿ ಕಟ್ಟಿ ಹಾಕುತ್ತಾನೆ… ಅದು ಮನುಷ್ಯನಿಗಿರುವ ಪವರ್‌… ನನಗೆ ಇದು ಸಾಧ್ಯ ಎಂದು ಮನುಷ್ಯ ದೃಢವಾದ ನಿಶ್ಚಯ ಮಾಡಿದರೆ ಏನನ್ನು ಬೇಕಾದರೂ ದಕ್ಕಿಸಿಕೊಳ್ಳಬಲ್ಲ, ಯಾವ ಪ್ರಾಣಿಯನ್ನು ಬೇಕಾದರೂ ಪಳಗಿಸಿ ಇಟ್ಟುಕೊಳ್ಳಬಲ್ಲ.. ಆದರೆ ತಾನೇ ಸೃಷ್ಟಿಸಿದ ಹಣದ ವಿಚಾರದಲ್ಲಿ ಮನುಷ್ಯ ಯಾಕೆ ಸೋಲುತ್ತಿದ್ದಾನೆ..? ಹಣದ ಹಿಂದೆ ಬಿದ್ದು ಮನುಷ್ಯ ಯಾಕೆ ಅದರ ಗುಲಾಮವಾಗುತ್ತಿದ್ದಾನೆ..?. ಹಣವನ್ನು ಕಳೆದುಕೊಂಡ ಮನುಷ್ಯನದ್ದು ಒಂದು ಚಿಂತೆಯಾದರೆ, ಲೆಕ್ಕ ಮೀರಿದಷ್ಟು ಹಣವನ್ನು ಕೂಡಿಟ್ಟ ಮನುಷ್ಯನದ್ದು ಮತ್ತೊಂದು ಚಿಂತೆ.
ಕೈಯಲ್ಲಿದ್ದಾಗ ನಿಯಂತ್ರಿಸೋದು ಗೊತ್ತಿಲ್ಲ.. ಹೊರಹೋದಾಗ ಕರೆತರೋದು ಗೊತ್ತಿಲ್ಲ!
ಅಂದರೆ ಹಣ ಹತ್ತಿರವಿದ್ದರೂ ಮನುಷ್ಯನಿಗೆ ಅದನ್ನು ನಿಯಂತ್ರಿಸೋದು ಗೊತ್ತಿಲ್ಲ.. ಹಣ ದೂರ ಹೋದಾಗಲೂ ಅದನ್ನು ಬಂಧಿಸಿ ಕರೆತರುವುದೂ ಗೊತ್ತಿಲ್ಲ… ಅದು ಗೊತ್ತಿರೋ ಬೆರಳೆಣಿಕೆ ಮಂದಿ ಮಾತ್ರ ಸಂತೋಷವಾಗಿದ್ದಾರೆ.. ಉಳಿದ ಬಹುತೇಕರು ನಮ್ಮ ಬಳಿ ಹಣವಿಲ್ಲ ಎಂದು ಕೊರಗುತ್ತಿದ್ದಾರೆ. ಇಲ್ಲವೇ ನಮ್ಮಲ್ಲಿರುವ ಹಣವನ್ನು ಕಾಪಾಡಿಕೊಳ್ಳುವುದು ಹೇಗೆ..? ಎಂದು ಚಿಂತಿಸುತ್ತಿದ್ದಾರೆ… ಇದಕ್ಕೆಲ್ಲಾ ಕಾರಣ ಹಣವೇ ನಮಗೆ ಎಲ್ಲಾ ಎಂದು ಮನುಷ್ಯ ಭಾವಿಸಿರುವುದು. ಮೆದುಳು, ಹೃದಯ ಎಲ್ಲವೂ ಇರೋ ಪ್ರಾಣಿಗಳನ್ನೇ ಪಳಗಿಸೋ ಮನುಷ್ಯ. ತಾನೇ ಸೃಷ್ಟಿಸಿದ ಈ ನಿರ್ಜೀವ ವಸ್ತುವಿಗೆ ಯಾಕೆ ಹೆದರುತ್ತಿದ್ದಾನೆ..? ಹಣಕ್ಕೆ ದೇವರ ರೂಪ ಕೊಟ್ಟು ಅದಕ್ಕೆ ಯಾಕೆ ತಲೆಬಾಗುತ್ತಿದ್ದಾನೆ..? ತಪ್ಪಸ್ಸು ಮಾಡಿ ದೇವರನ್ನೇ ಕಣ್ಣಮುಂದೆ ನಿಲ್ಲುವಂತೆ ಮಾಡುತ್ತೇನೆಂದು ನಂಬಿರುವ ನಮ್ಮ ಸಮಾಜದಲ್ಲಿ ಹಣ ಯಾಕೆ ಎಲ್ಲವನ್ನೂ ಮೀರಿ ಬೆಳೆದುಬಿಟ್ಟಿದೆ..? ಈ ಪ್ರಶ್ನೆಗಳನ್ನು ನೀವು ಎಂದಾದರೂ ಹಾಕಿಕೊಂಡಿದ್ದೀರಾ..?
ಆನೆಯನ್ನೇ ಪಳಗಿಸಿದ ನನಗೆ ಈ ಹಣವನ್ನು ಪಳಗಿಸೋದು ಯಾವ ಲೆಕ್ಕ ಎಂದು ಒಮ್ಮೆ ನಿಮ್ಮ ಮನಸ್ಸಿನಲ್ಲಿ ದೃಢವಾಗಿ ಅಂದುಕೊಳ್ಳಿ… ನಾನು ಪ್ರಿಂಟ್‌ಮಾಡಿದ ಈ ಕಾಗದ ನನ್ನೇನು ಮಾಡುತ್ತದೆ..? ಎಂದು ಉದಾಸೀನ ಮಾಡಿ… ಆಗ ಹಣ ಮನುಷ್ಯನೆಂಬ ಮಹಾಮೇಧಾವಿ ಮುಂದೆ ಏನೇನೂ ಅಲ್ಲ ಎನಿಸುತ್ತದೆ.. ಹಾಗೆ ಅನಿಸಬೇಕಾದರೆ, ನಾವು ಹಣವನ್ನು ಗೆಲ್ಲಬೇಕಾಗುತ್ತದೆ… ಅದಕ್ಕೊಂದು ತಾಲೀಮು ಮಾಡಬೇಕಾಗುತ್ತದೆ… ಆನೆಯನ್ನು ಪಳಗಿಸಲು ಹೇಗೆ ಖೆಡ್ಡಾ ತೋಡುತ್ತೇವೆಯೋ ಹಾಗೆ, ಹಣವನ್ನು ಪಳಗಿಸಲು ನಮ್ಮಲ್ಲೇ ತಂತ್ರಗಾರಿಕೆ ರೂಪಿಸಬೇಕಿದೆ…

Share Post