BengaluruEconomy

ಕರ್ನಾಟಕ ಎಫೆಕ್ಸ್‌; ಗಡಿಯಲ್ಲಿನ ಆಂಧ್ರದ ಪೆಟ್ರೋಲ್‌ ಬಂಕ್‌ಗಳಿಗೆ ಬೀಗ..!!

ಬೆಂಗಳೂರು; ಒಂದು ಪೆಟ್ರೋಲ್‌ ಬಂಕ್‌ಗೆ ಬೀಗ ಹಾಕಿ ಎಷ್ಟು ದಿನಾ ಆಯ್ತೋ ಏನೋ, ಬಂಕ್‌ ಆವರಣದ ತುಂಬಾ ಹುಲ್ಲು, ಗಿಡ ಬೆಳೆದುಬಿಟ್ಟಿದೆ. ಇನ್ನೊಂದು ಪೆಟ್ರೋಲ್‌ ಬಂಕ್‌ನಲ್ಲಿ ಹುಲ್ಲಿನ ಬಣವೆ ಹಾಕಲಾಗಿದೆ. ಇವೆರಡು ಉದಾಹರಣೆ ಅಷ್ಟೇ. ಕರ್ನಾಟಕದ ಗಡಿಯಲ್ಲಿರುವ ಆಂಧ್ರಪ್ರದೇಶದ ಬಹುತೇಕ ಪೆಟ್ರೋಲ್‌ ಬಂಕ್‌ಗಳ ಪರಿಸ್ಥಿತಿ ಇದೇ ಆಗಿದೆ. ಎಷ್ಟೋ ಪೆಟ್ರೋಲ್‌ ಬಂಕ್‌ಗಳಿಗೆ ಎರಡು ಮೂರು ವರ್ಷಗಳಿಂದ ಬೀಗ ಬಿದ್ದಿದೆ. ಇನ್ನೊಂದಷ್ಟು ಬಂಕ್‌ಗಳು ಗ್ರಾಹಕರಿಲ್ಲದೆ ನೊಣ ಹೊಡೆಯುತ್ತಿವೆ. ಇದಕ್ಕೆ ಕಾರಣ ಕರ್ನಾಟಕ. ಕರ್ನಾಟಕದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ ಆಂಧ್ರಪ್ರದೇಶಕ್ಕಿಂತ ತುಂಬಾನೇ ಕಡಿಮೆ ಇದೆ. ಹೀಗಾಗಿ ಗಡಿಯಲ್ಲಿರುವ ಆಂಧ್ರದ ಜನ ಕೂಡಾ ಕರ್ನಾಟಕಕ್ಕೆ ಬಂದು ಪೆಟ್ರೋಲ್‌, ಡೀಸೆಲ್‌ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ, ಗಡಿಯಲ್ಲಿರುವ ಆಂಧ್ರದ ಪೆಟ್ರೋಲ್‌ ಬಂಕ್‌ಗಳಿಗೆ ಬೀಗ ಬೀಳುತ್ತಿದೆ. 

    ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕರ್ನಾಟಕಕ್ಕಿಂತ ಆಂಧ್ರಪ್ರದೇಶದಲ್ಲಿ ಹೆಚ್ಚಾಗಿದೆ. ಅಷ್ಟೇ ಏಕೆ, ಹೆಚ್ಚುವರಿ ವ್ಯಾಟ್ ಮತ್ತು ರಸ್ತೆ ಅಭಿವೃದ್ಧಿ ಸೆಸ್ ಸಂಗ್ರಹದಿಂದಾಗಿ ಆಂಧ್ರಪ್ರದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾಗಲು ಕಾರಣವಾಗಿದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯಲ್ಲಿರುವ ಚಿಲಮತ್ತೂರು ಮಂಡಲ ಕೇಂದ್ರ ಮತ್ತು ಕರ್ನಾಟಕದ ಬಾಗೇಪಲ್ಲಿ ತಾಲ್ಲೂಕು ಕೇಂದ್ರಗಳ ನಡುವಿನ ಅಂತರ ಕೇವಲ 10 ಕಿಲೋ ಮೀಟರ್‌. ಈ ಪ್ರದೇಶದಲ್ಲಿ 14 ಪೆಟ್ರೋಲ್ ಪಂಪ್ ಗಳಿವೆ. ರಾಷ್ಟ್ರೀಯ ಹೆದ್ದಾರಿಯ ಆಂಧ್ರಪ್ರದೇಶದ ಬದಿಯಲ್ಲಿರುವ ಈ 14 ಬಂಕ್‌ಗಳಲ್ಲಿ ಏಳು ಪೆಟ್ರೋಲ್ ಪಂಪ್ ಗಳನ್ನು ಮುಚ್ಚಲಾಗಿದೆ.

ಲೀಟರ್‌ಗೆ 10-12 ರೂಪಾಯಿ ಹೆಚ್ಚಳ

   ಗಡಿಯಲ್ಲಿರುವ ಆಂಧ್ರಪ್ರದೇಶದ ಟೆರಿಟರಿಯಲ್ಲಿರುವ ಪೆಟ್ರೋಲ್ ಬಂಕ್ ಒಂದರ ಮಾಲೀಕರು ಹೇಳೋ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಒಂದರ ನಂತರ ಒಂದರಂತೆ ಬಂಕ್‌ಗಳನ್ನು ಮುಚ್ಚಲಾಗುತ್ತಿದೆ. ಮೇ 12 ರ ವೇಳೆಗೆ, ಆಂಧ್ರಪ್ರದೇಶದ ಪೆಟ್ರೋಲ್ ಬಂಕ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ  121.99 ರೂ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 107.52 ರೂ. ಇತ್ತು. ಅದೇ ದಿನ ಕರ್ನಾಟಕದ ಬಾಗೇಪಲ್ಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 111.56 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 95.21 ರೂ. ಇತ್ತು. ಇದರರ್ಥ ಕರ್ನಾಟಕಕ್ಕೆ ಹೋಲಿಸಿದರೆ ಆಂಧ್ರದಲ್ಲಿ ಪೆಟ್ರೋಲ್ ಬೆಲೆ ಸುಮಾರು 10 ರೂ ಮತ್ತು ಡೀಸೆಲ್ ಬೆಲೆ ಸುಮಾರು 12 ರೂ ಹೆಚ್ಚಿದೆ.

ಅಂದರೆ ನೀವು ಕರ್ನಾಟಕದಲ್ಲಿ 10 ಲೀಟರ್ ಡೀಸೆಲ್ ಖರೀದಿಸಿದರೆ, ನೀವು ಸುಮಾರು 120 ರೂ.ಗಳನ್ನು ಉಳಿಸುತ್ತೀರಿ. ಇದರ ಪರಿಣಾಮವಾಗಿ, ಆಂಧ್ರಪ್ರದೇಶದ ಅನೇಕ ಖರೀದಿದಾರರು ಕರ್ನಾಟಕದ ಬಂಕ್ ಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಕೂಡಾ ಕರ್ನಾಟಕದಲ್ಲಿಯೇ ಪೆಟ್ರೋಲ್‌, ಡೀಸೆಲ್‌ ತುಂಬಿಸಿಕೊಳ್ಳುತ್ತಿವೆ.

ಕ್ಯಾನ್‌ಗಳಲ್ಲಿ ತುಂಬಿಸಿಕೊಂಡು ಹೋಗ್ತಾರೆ

       ಬೆಂಗಳೂರು-ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಗೇಪಲ್ಲಿಗೆ ಕರ್ನಾಟಕ ಎಂಡ್‌ ಆಗುತ್ತದೆ. ಅನಂತರ ಆಂಧ್ರಪ್ರದೇಶ ಬರುತ್ತದೆ.  ಗಡಿಯಲ್ಲಿ ಚಿಲಮತ್ತೂರು, ಗೋರಂಟ್ಲ ಸೇರಿದಂತೆ ಹಲವು ಪಟ್ಟಣಗಳು ಕರ್ನಾಟಕದ ಗಡಿಯಲ್ಲಿಯೇ ಸಿಗುತ್ತವೆ. ಇಲ್ಲಿನ ಜನ ಬೈಕ್‌ಗಳಲ್ಲಿ ಕ್ಯಾನ್‌ಗಳನ್ನು ತಂದು ಪೆಟ್ರೋಲ್‌, ಡೀಸೆಲ್‌ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಪೆಟ್ರೋಲ್‌-ಡೀಸೆಲ್‌ ಮಾರಾಟ ಮಾಡುತ್ತಿದ್ದಾರೆ. ಅದೂ ಕೂಡಾ ಆಂಧ್ರದ ಪೆಟ್ರೋಲ್‌ ಬಂಕ್‌ಗಳಿಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಆಂಧ್ರದಲ್ಲಿರುವ ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರೇ ಕಾಣಿಸುತ್ತಿಲ್ಲ. ನೊಣ ಹೊಡೆಯುತ್ತಿದ್ದ ಬಂಕ್‌ ಮಾಲೀಕರು, ಪೂರ್ತಿಯಾಗಿ ಬಂಕ್‌ಗಳನ್ನೇ ಮುಚ್ಚುತ್ತಿದ್ದಾರೆ.

1500 ಲೀಟರ್‌ ಬದಲು 50 ಸಾವಿರ ಲೀಟರ್‌ ಮಾರಾಟ

   ಈ ಹಿಂದೆ, ಆಂಧ್ರಪ್ರದೇಶದ ಪೆಟ್ರೋಲ್‌ ಬಂಕ್‌ ಒಂದರಲ್ಲಿ ಸರಾಸರಿ 8,000 ಲೀಟರ್ ಡೀಸೆಲ್ ಮಾರಾಟವಾಗುತ್ತಿತ್ತು. ಆದ್ರೆ ಈಗ 150 ಲೀಟರ್ ಹೋಗುವುದೂ ಕಷ್ಟವಾಗಿದೆ. ಇತ್ತ ಕರ್ನಾಟಕದಲ್ಲಿ ದಿನಕ್ಕೆ 1500 ಲೀಟರ್ ಮಾರಾಟ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಗಳು ಈಗ 50,000 ಮತ್ತು 60,000 ಲೀಟರ್ ಡೀಸೆಲ್ ಮಾರಾಟ ಮಾಡುತ್ತಿವೆ. ಹೀಗಾಗಿ ಗಡಿಯಲ್ಲಿ ಕರ್ನಾಟಕದ ಬಂಕ್‌ಗಳಲ್ಲಿ ವಾಹನಗಳು ಯಾವಾಗಲೂ ಕ್ಯೂ ನಿಂತಿರುತ್ತವೆ.

  ಆಂಧ್ರ ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಏಳು ಬಂಕ್ ಗಳನ್ನು ಮುಚ್ಚಲಾಗಿದ್ದು, ಕರ್ನಾಟಕ ಗಡಿಯಲ್ಲಿ ಇನ್ನೂ ಆರು ಬಂಕ್ ಗಳು ತಲೆ ಎತ್ತಿವೆ. ಕರ್ನಾಟಕ ಗಡಿಯನ್ನು ಹಂಚಿಕೊಳ್ಳುವ ಪ್ರದೇಶಗಳಲ್ಲಿ ಅನಂತಪುರ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 60 ಬಂಕ್ ಗಳನ್ನು ಮುಚ್ಚಲಾಗಿದೆ ಮತ್ತು ಇನ್ನೂ 50 ಬಂಕ್ ಗಳನ್ನು ಮುಚ್ಚಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.

ಕೆಲಸ ಕಳೆದುಕೊಂಡ ಉದ್ಯೋಗಿಗಳು

 ಪ್ರತಿಯೊಂದು ಪೆಟ್ರೋಲ್ ಪಂಪ್ ಗಳು ಸುಮಾರು 15 ಜನರಿಗೆ ಉದ್ಯೋಗ ನೀಡಿದ್ದವು. ಬಂಕ್ ಗಳನ್ನು ಮುಚ್ಚಿದ್ದರಿಂದ ಅನೇಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಕೆಲವರು ಕರ್ನಾಟಕ ಬಂಕ್‌ಗಳಲ್ಲಿ ಸೇರಿದ್ದಾರೆ.

ಯಾಕೆ ಇಷ್ಟು ವ್ಯತ್ಯಾಸ..?

    ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವೆ ಏಕೆ ಅನೇಕ ವ್ಯತ್ಯಾಸಗಳಿವೆ ಎಂಬುದನ್ನು ನೋಡೋಣ. ಕರ್ನಾಟಕ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವ್ಯಾಟ್ ಅನ್ನು ಮಾತ್ರ ವಿಧಿಸುತ್ತಿದೆ. ಆಂಧ್ರಪ್ರದೇಶ ಸರ್ಕಾರ ಹೆಚ್ಚಿನ ವ್ಯಾಟ್ ವಿಧಿಸುತ್ತಿದೆ ಮತ್ತು ಹೆಚ್ಚುವರಿ ವ್ಯಾಟ್ ಮತ್ತು ರಸ್ತೆ ಅಭಿವೃದ್ಧಿ ಸೆಸ್ ಅನ್ನು ಸಂಗ್ರಹಿಸುತ್ತಿದೆ.

ಕರ್ನಾಟಕ ಸರ್ಕಾರ ಪೆಟ್ರೋಲ್ ಮೇಲೆ ಶೇಕಡಾ 25.92 ರಷ್ಟು ವ್ಯಾಟ್ ವಿಧಿಸಿದರೆ, ಆಂಧ್ರಪ್ರದೇಶ ಸರ್ಕಾರ ಶೇಕಡಾ 31 ರಷ್ಟು ವ್ಯಾಟ್ ವಿಧಿಸುತ್ತದೆ. ಜೊತೆಗೆ ಹೆಚ್ಚುವರಿ ವ್ಯಾಟ್ 4 ರೂ. ಹಾಗೂ 1 ರೂ.ಗಳ ಹೆಚ್ಚುವರಿ ರಸ್ತೆ ಸೆಸ್ ಅನ್ನು ಕೂಡಾ ವಿಧಿಸುತ್ತಿದೆ.

ಕರ್ನಾಟಕ ಸರ್ಕಾರ ಒಂದು ಲೀಟರ್ ಡೀಸೆಲ್ ಮೇಲೆ ಶೇಕಡಾ 14.34 ರಷ್ಟು ವ್ಯಾಟ್ ವಿಧಿಸುತ್ತದೆ. ಆಂಧ್ರಪ್ರದೇಶ ಸರ್ಕಾರ ಶೇಕಡಾ 22.25 ರಷ್ಟು ವ್ಯಾಟ್ ವಿಧಿಸುತ್ತದೆ. ಹೆಚ್ಚುವರಿಯಾಗಿ, 4 ರೂ.ಗಳ ಹೆಚ್ಚುವರಿ ವ್ಯಾಟ್ ಮತ್ತು 1 ರೂ.ಗಳ ರಸ್ತೆ ಸೆಸ್ ವಿಧಿಸಲಾಗುತ್ತದೆ.

ಜಿಎಸ್‌ಟಿ ಅಡಿ ಬರದೇ ಇದ್ದುದೇ ಇದಕ್ಕೆ ಕಾರಣ

ದೇಶದಲ್ಲಿ ಏಕರೂಪ ತೆರಿಗೆ ಅಡಿ ಪೆಟ್ರೋಲ್‌, ಡೀಸೆಲ್‌ ಬರುತ್ತಿಲ್ಲ. ವ್ಯಾಟ್‌ಗೆ ಬದಲಾಗಿ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌ ಬಂಕ್‌ಗಳನ್ನೂ ತಂದರೆ ದೇಶಾದ್ಯಂತ ಒಂದೇ ದರ ಇರುತ್ತದೆ. ಆದ್ರೆ, ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ವಿಧಿಸುವ ವ್ಯಾಟ್‌ ಅಡಿಯಲ್ಲಿ ಪೆಟ್ರೋಲ್‌ ಬಂಕ್‌ಗಳು ಬರುತ್ತವೆ. ಹೀಗಾಗಿ ಆಯಾ ರಾಜ್ಯಗಳು ವಿಧಿಸುವ ವ್ಯಾಟ್‌ ದರದ ಆಧಾರದ ಮೇಲೆ ಆಯಾ ರಾಜ್ಯಗಳ ಪೆಟ್ರೋಲ್‌, ಡೀಸೆಲ್‌ ದರಗಳು ನಿಗದಿಯಾಗುತ್ತವೆ.

Share Post