BengaluruEconomyNational

ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರಿಗೆ 400 ಕೋಟಿ ರೂ. ವಿತರಣೆ

ನವದೆಹಲಿ: ವಂಚನೆಗೊಳಗಾಗಿದ್ದ ಬೆಂಗಳೂರಿನ ಗುರು ರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ ನೌಕರರಿಗೆ ಕೇಂದ್ರ ಸರ್ಕಾರ 400 ಕೋಟಿ ರೂಪಾಯಿ ವಿಮಾ ಹಣ ನೀಡಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ಕಳೆದುಕೊಂಡ ಸಾವಿರಾರು ಗ್ರಾಹಕರು ಕೊಂಚ ನಿರಾಳರಾದಂತಾಗಿದೆ.

ಠೇವಣಿ ವಿಮೆ ಹಾಗೂ ಕ್ರೆಡಿಟ್‌ ಗ್ಯಾರೆಂಟಿ ಕಾರ್ಪರೇಷನ್‌ (dicgi) ಸುಮಾರು 12,014 ಠೇವಣಿದಾರರಿಗೆ ಒಟ್ಟು 400 ಕೋಟಿ ರೂಪಾಯಿ ವಿಮಾ ಹಣ ಒದಗಿಸಿದೆ. ತಲಾ 5 ಲಕ್ಷ ರೂಪಾಯಿಯನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಉಳಿದ ಠೇವಣಿದಾರರಿಗೆ ಒಂದು ವಾರದಲ್ಲಿ ವಿಮಾ ಹಣ ವರ್ಗಾವಣೆಯಾಗಲಿದೆ ಎಂದು ತೇಜಸ್ವಿ ಸೂರ್ಯ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ, ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನ  ಠೇವಣಿದಾರರ ಸಂಕಷ್ಟಕ್ಕೆ ಬಹುಬೇಗ ಸ್ಪಂದಿಸಿದ  ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ಕೇಂದ್ರದ ಹಣಕಾಸು ಸಚಿವರು, ಬಡ,ಮಧ್ಯಮ ವರ್ಗದ ಠೇವಣಿದಾರರ ಹಿತಾಸಕ್ತಿ ಗೆ ಪೂರಕವಾದ ಕ್ರಮಗಳನ್ನು  ತೆಗೆದುಕೊಂಡಿದ್ದಾರೆ. ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಇನ್ನಷ್ಟು ಪಾರದರ್ಶಕತೆ ಹಾಗೂ ವೃತ್ತಿಪರತೆ ತರುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ  ಶ್ರಮಿಸಿದ್ದು ಗಮನಾರ್ಹ ಎಂದು ಶ್ಲಾಘಿಸಿದ್ದಾರೆ.

2020 ರಲ್ಲಿ ಠೇವಣಿದಾರರ ವಿಮೆ ಮೊತ್ತವನ್ನು 1 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗೆ ಏರಿಸಿ, ಅದೇ ವರ್ಷದಲ್ಲಿ (ಸೆಪ್ಟೆಂಬರ್ 17,2020) 1949 ರ ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್ ಗೆ ತಿದ್ದುಪಡಿ ತರಲಾಯಿತು. ಎಲ್ಲ ಕೋ ಆಪರೇಟಿವ್ ಬ್ಯಾಂಕ್ ಗಳನ್ನು ರಿಸರ್ವ್ ಬ್ಯಾಂಕ್ ನ ನಿಬಂಧನೆಗಳು ಹಾಗೂ ನಿಯಮಾವಳಿಗಳ ಅಡಿಗೆ ತಂದಿದ್ದು ಕೇಂದ್ರ ಸರ್ಕಾರದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ನೆರವಿಗೆ ನಿಂತಿದ್ದು ಗಣನೀಯ ಸಾಧನೆ ಎಂದು ತೇಜಸ್ವಿ ಸೂರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಹನ್ನೊಂದು ವರ್ಷದ ಅವಧಿಯಲ್ಲಿ ಬೆಂಗಳೂರಿನ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸುಮಾರು 923 ಕೋಟಿ ರೂಪಾಯಿನಷ್ಟ ಅಕ್ರಮ ನಡೆದಿತ್ತು.  ಈ ಬ್ಯಾಂಕ್‌ನಲ್ಲಿ 2009ರಿಂದ 2020ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ ಕುರಿತು ಶೋಧಿಸಿರುವ ಸಿಐಡಿ, ವರ್ಷವಾರು ಲೆಕ್ಕಪರಿಶೋಧನೆ ನಡೆಸಿ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿತ್ತು.

ಬೇನಾಮಿ ಹೆಸರಿನಲ್ಲಿ ಬ್ಯಾಂಕ್‌ ಆಡಳಿತ ಮಂಡಳಿಯವರು ಕೋಟಿ ಕೋಟಿ ಸಾಲ ಪಡೆದು ಬ್ಯಾಂಕ್‌ಗೆ ವಂಚಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಹಕರು ಕೋರ್ಟ್‌ ಮೊರೆಹೋಗಿದ್ದಾರೆ. ಈ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರಲ್ಲಿ ಬಹುತೇಕರು ನಿವೃತ್ತಿ ಹೊಂದಿದವರಾಗಿದ್ದು, ಬಡ್ಡಿ ಹಣದಲ್ಲಿ ಜೀವನ ನಡೆಸುತ್ತಿದ್ದರು.

Share Post