ಗಂಡನ ಬಳಿಗೆ ಮಗು ಕಳುಹಿಸಲು ಇಷ್ಟವಿಲ್ಲದೆ ಹೆತ್ತ ಮಗನನ್ನು ಕೊಂದ ಮಹಿಳೆ!
ಚಿತ್ರದುರ್ಗ; 4 ವರ್ಷದ ಮಗನನ್ನು ತಾಯಿಯೇ ಕೊಂದು ಸೂಟ್ಕೇಸ್ನಲ್ಲಿ ಸಾಗಿಸಿರುವ ಪ್ರಕರಣ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡಿದೆ. ಭಾನುವಾರ ಮಗುವಿನೊಂದಿಗೆ ಗೋವಾಕ್ಕೆ ಹೋಗಿದ್ದ ಮಹಿಳೆ ಅಲ್ಲಿನ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಮಗುವನ್ನು ಸಾಯಿಸಿದ್ದಾಳೆ. ಇದಕ್ಕೆ ಕಾರಣ ಆಕೆ ಮಾಜಿ ಗಂಡ ಅನ್ನೋದು ಈಗ ಗೊತ್ತಾಗಿದೆ. ಆರೋಪಿ ಸೂಚನಾ ಸೇಠ್ ಇತ್ತೀಚೆಗಷ್ಟೇ ತನ್ನ ಗಂಡನಿಂದ ಡಿವೋರ್ಸ್ ಪಡೆದಿದ್ದಳು. ಈ ಹಿನ್ನೆಲೆಯಲ್ಲಿ ಮಗುವನ್ನು ಪತಿ ಭಾನುವಾರ ಗಂಡ ಬಳಿ ಕಳುಹಿಸಬೇಕು ಎಂದು ಕೋರ್ಟ್ ಸೂಚಿಸಿತ್ತು. ಇದಕ್ಕೆ ಸೂಚನಾ ಸೇಠ್ ಒಪ್ಪಿರಲಿಲ್ಲ. ಮಗುವನ್ನು ಗಂಡನ ಬಳಿಗೆ ಕಳುಹಿಸಲು ಇಷ್ಟವಿಲ್ಲದೆ ಸೂಚನಾ ಸೇಠ್ ತನ್ನ ಸ್ವಂತ ಮಗುವನ್ನೇ ಹತ್ಯೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಆರೋಪಿ ಸೂಚನಾ ಸೇಠ್ ಸದ್ಯ ಚಿತ್ರದುರ್ಗದ ಐಮಂಗಲ ಪೊಲೀಸರ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಿಇಒ ಸೂಚನಾ ಸೇಠ್, ಉತ್ತರ ಗೋವಾದ ಕಂಡೋಲಿಮಾ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಭಾನುವಾರದಿಂದ ತಂಗಿದ್ದಳು. ಅಲ್ಲಿಯೇ ನಾಲ್ಕು ವರ್ಷದ ಮಗನನ್ನು ಕೊಂದಿದ್ದಾಳೆ. ನಂತರ ಶವವನ್ನು ಸೂಟ್ಕೇಸ್ನಲ್ಲಿ ಇಟ್ಟುಕೊಂಡು ಟ್ಯಾಕ್ಸಿ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾಳೆ. ಇನ್ನು ಮಹಿಳೆ ಖಾಲಿ ಮಾಡಿದ ನಂತರ ಸರ್ವೀಸ್ ಅಪಾರ್ಟ್ಮೆಂಟ್ ಸಿಬ್ಬಂದಿ ಕ್ಲೀನಿಂಗ್ ಮಾಡುವಾಗ ರಕ್ತದ ಕಲೆಗಳು ಪತ್ತೆಯಾಗಿವೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ, ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಗನ ಜೊತೆ ಬಂದಿದ್ದ ಮಹಿಳೆ, ಒಬ್ಬರೇ ವಾಪಸ್ ಹೋಗಿರುವುದು ಗೊತ್ತಾಗಿದೆ. ತಕ್ಷಣವೇ ಗೋವಾ ಪೊಲೀಸ್ ಇನ್ಸ್ಪೆಕ್ಟರ್, ಸೂಚನಾ ಸೇಠ್ ಗೆ ಕರೆ ಮಾಡಿ, ಮಗು ಎಲ್ಲಿ ಎಂದು ಕೇಳಿದ್ದಾರೆ. ಆಗ ಆಕೆ, ಸಂಬಂಧಿಕರ ಮನೆಯಲ್ಲಿ ಬಿಟ್ಟಿರೋದಾಗಿ ಹೇಳಿದ್ದಾಳೆ. ನಂತರ ಸಂಬಂಧಿಕರ ಮನೆಯ ಅಡ್ರೆಸ್ ಎಂದು ನಕಲಿ ಅಡ್ರೆಸ್ ಕೊಟ್ಟಿದ್ದಾಳೆ.
ಹೀಗಾಗಿ ಗೋವಾ ಪೊಲೀಸರು, ಸೂಚನಾ ಸೇಠ್ ತೆರಳುತ್ತಿದ್ದ ಕಾರಿನ ಚಾಲಕನ ಜೊತೆ ಮಾತನಾಡಿದ್ದಾರೆ. ಕಾರು ಚಾಲಕನಿಗೆ ಪೊಲೀಸರು ನೀನು ಹತ್ತಿರದ ಪೊಲೀಸ್ ಠಾಣೆಗೆ ಹೋಗು ಎಂದು ಸೂಚಿಸಿದ್ದಾರೆ. ಗೋವಾ ಪೊಲೀಸರ ಸೂಚನೆಯಂತೆ ಆತ, ಚಿತ್ರದುರ್ಗದ ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಅಲ್ಲಿ ಪೊಲೀಸರು ಸೂಟ್ಕೇಸ್ ಪರಿಶೀಲಿಸಿದಾಗ ಮಗುವಿನ ಮೃತದೇಹ ಸಿಕ್ಕದೆ.
ಸೂಚನಾ ಸೇಠ್ ಅವರು ದಿ ಮೈಂಡ್ ಫುಲ್ AI ಲ್ಯಾಬ್ ಕಂಪನಿಯ ಸಿಇಒ ಆಗಿದ್ದು, ಲಿಂಕ್ಡನ್ ಪ್ರೊಫೈಲ್ನಲ್ಲಿ AI ಎಥಿಕ್ಸ್ ಎಕ್ಸ್ಫರ್ಟ್ ಎಂದು ಉಲ್ಲೇಖವಾಗಿದೆ. ಈ ಮೊದಲು ಅಮೆರಿಕಾದ ನ್ಯೂಯಾರ್ಕ್ನಲ್ಲಿ ಕೆಲಸ ಮಾಡಿದ್ದ ಸೂಚನಾ ಸೇಠ್, AI ಎಥಿಕ್ಸ್ ಲಿಸ್ಟ್ ನಲ್ಲಿ ನೂರು ಮಂದಿ ಬ್ರಿಲಿಯೆಂಟ್ ಮಹಿಳೆಯರಲ್ಲಿ ಒಬ್ಬರು ಎಂದು ಬರೆಯಲಾಗಿದೆ.