BengaluruPolitics

ಅಂಜನಾದ್ರಿಯಿಂದ ರಾಮದೇವರ ಬೆಟ್ಟದವರೆಗೆ ಜೆಡಿಎಸ್‌ ರಾಮತೀರ್ಥ ರಥಯಾತ್ರೆ!

ಬೆಂಗಳೂರು; ದೇಶದಲ್ಲಿ ಬಿಜೆಪಿ ಸಂಘಟನೆ ಮಾಡುವ ಸಂದರ್ಭದಲ್ಲಿ ಎಲ್‌.ಕೆ.ಅಡ್ವಾಣಿ ನೇತೃತ್ವದಲ್ಲಿ ಹಲವು ಬಾರಿ ರಥಯಾತ್ರೆಗಳನ್ನು ಮಾಡಲಾಗಿತ್ತು. ಇದರಿಂದಾಗಿ ಬಿಜೆಪಿಗೆ ಸಾಕಷ್ಟು ಅನುಕೂಲವಾಗಿತ್ತು. ಇದೀಗ ಬಿಜೆಪಿ ಜೊತೆ ಸೇರಿ ಹಿಂದುತ್ವದ ಜಪ ಮಾಡುತ್ತಿರುವ ಜೆಡಿಎಸ್‌ ಕೂಡಾ ತನ್ನ ಬಲ ಹೆಚ್ಚಿಸಿಕೊಳ್ಳಲು ರಥಯಾತ್ರೆಯ ಮೊರೆ ಹೋಗಲು ಮುಂದಾಗಿದೆ. ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ರಾಮತೀರ್ಥ ರಥಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಮನಾಮ ಜಪ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗಬಹುದು ಎಂಬ ಲೆಕ್ಕಾಚಾರದಲ್ಲಿ ರಾಮತೀರ್ಥ ರಥಯಾತ್ರೆ ಮಾಡಲು ಜೆಡಿಎಸ್‌ ನಾಯಕರು ಪ್ಲ್ಯಾನ್‌ ಮಾಡುತ್ತಿದ್ದಾರೆ. ಹನುಮ ಜನ್ಮಸ್ಥಳ ಕೊಪ್ಪಳದ ಅಂಜನಾದ್ರಿಯಿಂದ ರಾಮನಗರದ ರಾಮದೇವರ ಬೆಟ್ಟದವರೆಗೆ ಈ ರಥ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಇದಕ್ಕಾಗಿ ಈಗಾಗಲೇ ರೂಟ್‌ ಮ್ಯಾಪ್‌ ಕೂಡಾ ರೆಡಿಯಾಗಿದೆ ಎಂದು ಹೇಳಲಾಗುತ್ತಿದೆ.

ನಿಖಿಲ್‌ ಕುಮಾರ ಸ್ವಾಮಿ ನೇತೃತ್ವದಲ್ಲಿ ಸಂಕ್ರಾಂತಿಯ ದಿನ ಅಥವಾ ಹಬ್ಬದ ನಂತರ ಅಂಜನಾದ್ರಿಯಿಂದ ಈ ರಥಯಾತ್ರೆ ಪ್ರಾರಂಭವಾಗಲಿದೆ. ರಾಮನಗರದ ರಾಮದೇವರಬೆಟ್ಟದಲ್ಲಿ ಈ ರಥಯಾತ್ರೆ ಅಂತ್ಯವಾಗಲಿದೆ. ರಾಮದೇವರ ಬೆಟ್ಟದಲ್ಲಿ ರಾಮ ತೀರ್ಥವನ್ನು ಸಂಗ್ರಹಿಸುವ ಮೂಲಕ ರಥಯಾತ್ರೆಗೆ ಅಂತ್ಯಹಾಡಲು ತೀರ್ಮಾನಿಸಲಾಗಿದೆಯಂತೆ. ವನವಾಸದ ವೇಳೆ ಸೀತಾ ದೇವಿ ದಾಹ ತೀರಿಸುವುದಕ್ಕೆರಾಮನಗರದ ರಾಮದೇವರ ಬೆಟ್ಟದಲ್ಲಿ ಶ್ರೀರಾಮನು ತನ್ನ ಬಾಣದಿಂದ ನೀರಿನ ಸೆಲೆ ಸೃಷ್ಟಿಸಿದ್ದರು ಎಂಬ ಐತಿಹ್ಯವಿದೆ. ಈ ನೀರಿನ ಸೆಲೆಯನ್ನ ರಾಮ ತೀರ್ಥ ಅಂತಾನೇ ಕರೆಯಲಾಗುತ್ತೆ. ಈ ರಾಮತೀರ್ಥವನ್ನು ಸಂಗ್ರಹಿಸಿರುವ ಜೆಡಿಎಸ್‌ ನಾಯಕರು, ಜನವರಿ 22ರಂದು ಅಯೋಧ್ಯೆಗೆ ಅದನ್ನು ಕೊಂಡೊಯ್ಯಲಿದ್ದಾರೆ ಎಂದು ತಿಳಿದುಬಂದಿದೆ.

ನಿಖಿಲ್‌ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿಯವರು ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಕೂಡಾ ರಾಮ ತೀರ್ಥ ರಥಯಾತ್ರೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಂಕ್ರಾಂತಿಯ ದಿನ ಅಥವಾ ಹಬ್ಬದ ಬಳಿಕ ಯಾತ್ರೆ ಆರಂಭ ಮಾಡುವಂತೆ ದೇವೇಗೌಡರು ಸಲಹೆ ನೀಡಿದಾರೆ ಎಂದು ತಿಳಿದುಬಂದಿದೆ.

Share Post