ಕಾಲಭೈರವನಿಗೆ ಪೂಜೆ ಸಲ್ಲಿಸಿದರೆ ಅಧಿಕಾರ ಸಿಗುತ್ತಾ..?; ಡಿಕೆಶಿ ಅಮಾವಾಸ್ಯೆ ಪೂಜೆ ಹಿಂದಿನ ರಹಸ್ಯವೇನು..?
ಮಂಡ್ಯ; ಇಂದು ಅಮಾವಾಸ್ಯೆ. ಅಮಾವಾಸ್ಯೆಗೂ ಆದಿಚುಂಚನಗಿರಿ ಕಾಲಭೈರವೇಶ್ವರನಿಗೂ ವಿಶೇಷ ನಂಟು. ಅಮಾವಾಸ್ಯೆ ದಿನ ಕಾಲಭೈರವನಿಗೆ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡರೆ ನಾವು ಬಯಸಿದ್ದು ಆಗುತ್ತೆ ಅನ್ನೋದು ನಂಬಿಕೆ ಇದೆ. ಹೀಗಾಗಿಯೇ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆದಿಚುಂಚನಗಿರಿಗೆ ಭೇಟಿ ನೀಡಿ ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಮಾಡುವಂತೆ ಡಿ.ಕೆ.ಶಿವಕುಮಾರ್ ಅವರ ದೇವರಲ್ಲಿ ಬೇಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ವರ ಕೇಳೋದು ನಾನು, ಕೊಡೋದು ದೇವರು ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಇನ್ನೆರಡು ಅಮಾವಾಸ್ಯೆಗಳಂದು ಕೂಡಾ ಕ್ಷೇತ್ರಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ಕಾಲಬೈರವನಿಗೆ ಪೂಜೆ ಸಲ್ಲಿಸಿದರೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಂಬಿಕೆ ಇದೆಯಂದೆ. 2018ರಲ್ಲಿ ಕುಮಾರಸ್ವಾಮಿಯವರು ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಮೂರು ಅಮಾವಾಸ್ಯೆಗಳಲ್ಲಿ ಅವರು ಕಾಲಭೈರವನಿಗೆ ಪೂಜೆ ಸಲ್ಲಿಸಿ, ಹರಕೆ ಹೊತ್ತಿದ್ದರು. ಅನಂತರ ಅವರು ಸಿಎಂ ಆಗಿದ್ದರು. ಈ ಕಾರಣಕ್ಕಾಗಿಯೇ ಡಿ.ಕೆ.ಶಿವಕುಮಾರ್ ಅವರು ಕಾಲಭೈರವನಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಗೌಡರ ಕುಟುಂಬ ಯಾವಾಗಲೂ ಕಾಲಭೈರವನಿಗೆ ಪೂಜೆ ಸಲ್ಲಿಸುತ್ತದೆ. ದೇವೇಗೌಡರ ಕುಟುಂಬ ಒಂಬತ್ತು ಅಮಾವಾಸ್ಯೆಗಳಂದು ಕಾಲಭೈರವನಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥನೆ ಮಾಡಿದ್ದರು. ದೇವೇಗೌಡರು ಮೂರು ಬಾರಿ, ರೇವಣ್ಣ ದಂಪತಿ ಮೂರು ಬಾರಿ ಹಾಗೂ ಕುಮಾರಸ್ವಾಮಿ ದಂಪತಿ ಮೂರು ಬಾರಿ ಪೂಜೆ ಸಲ್ಲಿಸಿತ್ತು.
ಕಾಲಭೈರವ ದೇಗುಲದ ವಿಶೇಷತೆ ಏನು..?
ಆದಿಚುಂಚನಗಿರಿ ಮಠಕ್ಕೆ ಹೋಗುವ ದಾರಿಯ ಪಕ್ಕದಲ್ಲಿಯೇ ಎಡಗಡೆಗೆ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನವಿದೆ. ಕಾಲಭೈರವನ ಬಗ್ಗೆ ಸಿದ್ಧಲಿಂಗ ಪುರಾಣದಲ್ಲಿ ಪ್ರಸ್ತಾಪವಿದೆ. ಕಾಲಭೈರವ ರಾಕ್ಷಸ ಸಂಹಾರಾರ್ಥವಾಗಿ ವಿಷ್ಣು ಮೋಹಿನಿಯ ರೂಪವನ್ನು ತಾಳಿ, ತನ್ನ ಕಾರ್ಯವಾದ ಮೇಲೆ ಸ್ವಧಾಮಕ್ಕೆ ಹಿಂದಿರುಗಿದನು. ಆದರೆ ಶಿವನು ಮೋಹಿನಿಯ ಸೌಂದರ್ಯವನ್ನು ಕಂಡು ವ್ಯಾಮೋಹಗೊಂಡನು. ಶಿವನ ಸಂಬಂಧದಿಂದ ಗರ್ಭಿಣಿಯಾದ ಮೋಹಿನಿಯು ಶಿವಶಕ್ತಿಯನ್ನು ಗರ್ಭದಲ್ಲಿ ಒಂಬತ್ತು ತಿಂಗಳ ಕಾಲ ಧರಿಸಿರಲು ಸಾಧ್ಯವಾಗಲಿಲ್ಲ. ಹೀಗೆ ಅಕಾಲದಲ್ಲಿ ಜನಿಸಿದ ವಿಷ್ಣು ಮತ್ತು ಶಿವರ ಶಕ್ತಿಗೆ ಅಕಾಲ ಭೈರವನೆಂದು ಹೆಸರು ಬಂದಿತು. ಮುಂದೆ ಇವನೇ ಕಾಲಭೈರವನೆಂದು ಪ್ರಸಿದ್ಧನಾಗಿ ಶಿವನ ದ್ವಾರಪಾಲಕನಾದನು. ಪಾರ್ವತಿಯ ಮಕ್ಕಳೆಂದು ಪ್ರಸಿದ್ಧರಾದ ಲೋಕಕ್ಕೆ ಅನ್ನದಾತರಾದ ಒಕ್ಕಲಿಗರಿಗೆ ಆರಾಧ್ಯದೇವನಾಗು ಎಂಬ ಶಿವಾಜ್ಞೆಯಂತೆ ಕಾಲಭೈರವನು ಆದಿಚುಂಚನಗಿರಿಗೆ ಬಂದು ನೆಲೆಸಿದನೆಂದು ತಿಳಿದು ಬರುತ್ತದೆ.
ಭೈರವನ ಬಗ್ಗೆ ಭಕ್ತರು ಹಾಡಿರುವ ಜನಪದ ಗೀತೆಗಳು ಸಹ ಭೈರವನ ಲೀಲೆಯನ್ನು ಪ್ರತಿಪಾದಿಸುತ್ತವೆ. ಬಾಗಿಲು ಭೈರವನನ್ನು ’ಅನ್ನದಾನಿ ಭೈರವ’ ಎಂದು ಕರೆಯುವುದು ರೂಢಿಯಲ್ಲಿದೆ. ಇದಲ್ಲದೆ ’ಬೆಟ್ಟದ ಭೈರವ’, ’ಕಾಲಭೈರವ’ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಜಾತಿ, ಮತ, ಭೇದಗಳಿಲ್ಲದೆ ಎಲ್ಲರೂ ಭೈರವನ ಒಕ್ಕಲಾಗಿದ್ದಾರೆ; ಭೈರವನು ಕುಲದೈವ ಹಾಗೂ ಮನೆದೇವರಾಗಿದ್ದುಕೊಂಡು, ಭಕ್ತಾದಿಗಳ ಇಷ್ಟಾರ್ಥಗಳನ್ನು ಕರುಣಿಸುವನು. ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿ ಈ ಕ್ಷೇತ್ರದ ಹಿರಿಮೆಗೆ ತಕ್ಕಂತೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಬೃಹತ್ ದೇವಾಲಯವನ್ನು ಸುಮಾರು ೮೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ್ದಾರೆ.