DistrictsPolitics

ಕಾಂಗ್ರೆಸ್‌ ಅಭ್ಯರ್ಥಿಯನ್ನೇ ಸಿದ್ದರಾಮಯ್ಯ ಮೋಸಗಾರ ಅಂದಿದ್ದು ಏಕೆ..?

ಮೈಸೂರು; ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಹೀನಾಯವಾಗಿ ಸೋತಿದ್ದರು. ಅದರ ಸೇಡು ತೀರಿಸಿಕೊಳ್ಳೋದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತವಕಿಸುತ್ತಿದ್ದರು. ಅದಕ್ಕಾಗಿ ಅವರು, ಜಿ.ಡಿ.ದೇವೇಗೌಡರ ವಿರುದ್ಧ ಸಿಡಿದೆದ್ದು ಕಾಂಗ್ರೆಸ್‌ಗೆ ಬಂದಿದ್ದ ಮಾವಿನಹಳ್ಳಿ ಸಿದ್ದೇಗೌಡರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಅವರ ಪರವಾಗಿ ಬೃಹತ್‌ ಬಹಿರಂಗ ಸಭೆಯನ್ನು ಕೂಡಾ ನಡೆಸಿದ್ದರು. ಆದ್ರೆ ಇದೀಗ ಸಿದ್ದರಾಮಯ್ಯ ಅವರು ಮಾವಿನಹಳ್ಳಿ ಸಿದ್ದೇಗೌಡರನ್ನು ಮೋಸಗಾರ ಎಂದು ಕರೆಯುತ್ತಿದ್ದಾರೆ. ಆ ಮೂಲಕ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡಿದ್ದಾರೆ.

ಜಿ.ಟಿ.ದೇವೇಗೌಡರಿಗೆ ಆಪ್ತರೇ ಆಗಿದ್ದ ಮಾವಿನಹಳ್ಳಿ ಸಿದ್ದೇಗೌಡರು ಕೆಲ ತಿಂಗಳಿಂದ ಅವರಿಂದ ದೂರ ಇದ್ದರು. ಜಿ.ಟಿ.ದೇವೇಗೌಡರು ಕಾಂಗ್ರೆಸ್‌ ಸೇರೋದಕ್ಕೆ ಸಿದ್ಧತೆ ನಡೆಸಿದ್ದಾಗ ಜೆಡಿಎಸ್‌ ಅಭ್ಯರ್ಥಿಯಾಗೋಕೆ ಶ್ರಮಿಸುತ್ತಿದ್ದರು. ಜೆಡಿಎಸ್‌ ವರಿಷ್ಠರು ಕೂಡಾ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದರು. ಆದರೆ ಕೊನೇ ಕ್ಷಣದಲ್ಲಿ ಜಿ.ಟಿ.ದೇವೇಗೌಡರು ಜೆಡಿಎಸ್‌ನಲ್ಲೇ ಉಳಿದುಕೊಂಡರು. ಇದರಿಂದ ರೊಚ್ಚಿಗೆದ್ದ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಹಲವು ನಾಯಕರು ಕಾಂಗ್ರೆಸ್‌ಗೆ ಬಂದರು. ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್‌ ಕೊಟ್ಟರೆ ಜಿ.ಟಿ.ಡಿ ವಿರುದ್ಧ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದ ಸಿದ್ದರಾಮಯ್ಯ ಅವರು ಹೈಕಮಾಂಡ್‌ ಜೊತೆ ಮಾತನಾಡಿ ಟಿಕೆಟ್‌ ಕೊಡಿಸಿದ್ದರು. ಆದ್ರೆ ಮಾವಿನಹಳ್ಳಿ ಸಿದ್ದೇಗೌಡ ಅವರು ಮತದಾನ ಇನ್ನು ಮೂರು ದಿನ ಇದೆ ಅನ್ನುವಾಗ ಕಾರ್ಯಕರ್ತರ ಕೈಗೆ ಸಿಗದಂತಾದರು. ಈ ಮೂಲಕ ಜಿ.ಟಿ.ದೇವೇಗೌಡರ ಗೆಲುವಿನ ಪರೋಕ್ಷವಾಗಿ ಕಾರಣರಾಗಿದ್ದಾರೆ.

ಇದೆಲ್ಲಾ ಕಾರಣಕ್ಕೆ ಸಿದ್ದರಾಮಯ್ಯ ಅವರು ಮಾವಿನಹಳ್ಳಿ ಸಿದ್ದೇಗೌಡರ ವಿರುದ್ಧ ಹರಿಹಾಯ್ದಿದ್ದಾರೆ. ಅವನೊಬ್ಬ ಮೋಸಗಾರ ಎಂದು ಹೇಳಿದ್ದಾರೆ. ಅವನು ಇಂಥ ವ್ಯಕ್ತಿ ಎಂದು ಗೊತ್ತಿದ್ದರೆ ನಮ್ಮ ಹುಡುಗನನ್ನೇ ನಿಲ್ಲಿಸುತ್ತಿದ್ದೆ ಎಂದೂ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

Share Post