BengaluruPolitics

ಹುಟ್ಟುಹಬ್ಬದಂದೇ ಸಿಎಂ ಆಗ್ತಾರಾ ಡಿ.ಕೆ.ಶಿವಕುಮಾರ್‌..? ; ಅಂದು ನೊಣವಿನ ಕೆರೆ ಅಜ್ಜಯ್ಯ ಹೇಳಿದ್ದೇನು..?

ಬೆಂಗಳೂರು; ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದೆ. ಇನ್ನು ಫಲಿತಾಂಶ ಮಾತ್ರ ಬಾಕಿ ಇದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕೆಲವು ಸಮೀಕ್ಷೆಗಳಲ್ಲಿ ಸುಮಾರು ಐದು ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತ ಬರಲಿದೆ ಎಂದು ಹೇಳಿವೆ. ಅದರಲ್ಲಿ ಎರಡು ಸಮೀಕ್ಷೆಗಳು ಕಾಂಗ್ರೆಸ್‌ಗೆ ಸ್ಪಷ್ಟ ಹಾಗೂ ಭಾರಿ ಬಹುಮತ ಬರಲಿದೆ ಎಂದು ವರದಿ ಮಾಡಿವೆ. ಇನ್ನು ಕೆಲವು ಸಮೀಕ್ಷೆಗಳು ಅತಂತ್ರ ಫಲಿತಾಂಶ ಬರುತ್ತೆ ಎಂದು ಹೇಳುತ್ತಿದ್ದರೂ, ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತೆ ಎಂದು ಹೇಳಿವೆ. ಇದೆಲ್ಲಾ ನೋಡಿದರೆ ಕಾಂಗ್ರೆಸ್‌ ಗೆಲ್ಲುವ, ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ.

ಮೇ 13ಕ್ಕೆ ಫಲಿತಾಂಶ ಬರಲಿದೆ. ಅಂದು ಯಾವ ಪಕ್ಷ ಅಧಿಕಾರ ಹಿಡಿಯುತ್ತೆ ಅನ್ನೋದು ಸ್ಪಷ್ಟವಾಗುತ್ತೆ. ಅದಕ್ಕೆ ಇನ್ನು ಎರಡೇ ದಿನ ಬಾಕಿ ಇರೋದು. ಸಮೀಕ್ಷೆಗಳಂತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗ್ತಾರೆ ಅನ್ನೋದು ಕುತೂಹಲ ಎಲ್ಲರಿಗೂ ಇದೆ. ಯಾಕಂದ್ರೆ ಈ ರೇಸ್‌ನಲ್ಲಿ ಪ್ರಮುಖವಾಗಿ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಒಲವು ಡಿ.ಕೆ.ಶಿವಕುಮಾರ್‌ ಪರ ಇದ್ದಂತೆ ಕಾಣುತ್ತಿದೆ. ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷರಾಗಿರುವವರಿಗೆ ಸಿಎಂ ಸ್ಥಾನ ಕೊಡೋದು ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ರೂಢಿ ಇದೆ. ಮತ್ತೊಂದು ವಿಚಾರ ಹೇಳಬೇಕು ಅಂದರೆ, ಡಿ.ಕೆ.ಶಿವಕುಮಾರ್‌ ಅವರು ಕೊರೊನಾ ಸಮುಯದಲ್ಲಿ ರಾಜ್ಯ ಕಾಂಗ್ರೆಸ್‌ ನೊಗ ಹೊತ್ತುಕೊಂಡರು ಅಂದಿನಿಂದ ನಿರಂತರವಾಗಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಹೈಕಮಾಂಡ್‌ಗೆ ನಿಷ್ಠರಾಗಿ ಕೆಲಸ ಮಾಡಿದ್ದಾರೆ. ಇದು ಅವರು ಸಿಎಂ ಆಗೋದಕ್ಕೆ ವರವಾಗಬಹುದು. ಇನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ದೈವಬಲವೂ ಇದೆ.

ಡಿ.ಕೆ.ಶಿವಕುಮಾರ್‌ ಅವರು ಏನೇ ಕಷ್ಟ ಬಂದರೂ ತುಮಕೂರಿನ ನೊಣವಿನ ಕೆರೆಯ ಅಜ್ಜಯ್ಯನ ಮಠಕ್ಕೆ ಭೇಟಿ ನೀಡುತ್ತಾರೆ. ಅಜ್ಜಯ್ಯನ ಆಶೀರ್ವಾದ ಪಡೆಯುತ್ತಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಕಾನೂನು ಸಂಕಷ್ಟಗಳು ಎದುರಾದಾಗ ಕೂಡಾ ಅವರು ಇದೇ ಮಠಕ್ಕೆ ಹೋಗಿ ಹರಕೆ ಹೊತ್ತುಕೊಂಡಿದ್ದರು. ಕಾಡಸಿದ್ದೇಶ್ವರ ಸ್ವಾಮೀಜಿ ಆತ್ಮ ಅಜ್ಜಯ್ಯನಲ್ಲಿ ಐಕ್ಯವಾಗಿದೆ ಎಂಬ ಪ್ರತೀತಿ ಇರುವುದರಿಂದ ಡಿ.ಕೆ.ಶಿವಕುಮಾರ್‌ ಅಜ್ಜಯ್ಯರನ್ನು ಹೆಚ್ಚು ನಂಬುತ್ತಾರೆ. ಇದೇ ಅಜ್ಜಯ್ಯ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಆಗುವುದಾಗಿ ಆಶೀರ್ವಾದ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್‌ ಅವರು ಮಠಕ್ಕೆ ಭೇಟಿ ನೀಡಿದ್ದಾಗ ನಿನ್ನ ಹುಟ್ಟುಹಬ್ಬದ ದಿನವೇ ಮುಖ್ಯಮಂತ್ರಿಯಾಗುತ್ತೀಯಾ ಎಂದು ಆಶೀರ್ವಾದ ಮಾಡಿದ್ದರು. ಈಗ ಅದು ನಿಜವಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಯಾಕಂದ್ರೆ ಮೇ 13ರಂದು ಫಲಿತಾಂಶ ಬರಲಿದೆ. ಡಿ.ಕೆ.ಶಿವಕುಮಾರ್‌ ಹುಟ್ಟುಹಬ್ಬ ಮೇ 15ಕ್ಕಿದೆ. ಹೀಗಾಗಿ, ಕಾಂಗ್ರೆಸ್‌ ಗೆದ್ದರೆ, ಡಿ.ಕೆ.ಶಿವಕುಮಾರ್‌ ಅವರು ಹುಟ್ಟುಹಬ್ಬದಂದೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶವಿದೆ.

ಡಿ.ಕೆ.ಶಿವಕುಮಾರ್‌ ಅವರು ಟ್ರಬಲ್‌ ಶೂಟರ್‌ ಎಂದೇ ಹೆಸರು. ಮೊದಲಿನಿಂದ ಕಾಂಗ್ರೆಸ್‌ ಹೈಕಮಾಂಡ್‌ ಹೇಳಿದ್ದನ್ನೂ ಚಾಚೂ ತಪ್ಪದೆ ಮಾಡಿಕೊಂಡು ಬಂದಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ವೇಳೆಯಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್‌ ಶಾಸಕರ ಖರೀದಿ ಮಾಡುವ ಅಪಾಯವಿತ್ತು. ಹೀಗಾಗಿ ಕಾಂಗ್ರೆಸ್‌ ಶಾಸಕರನ್ನು ಸೇಫಾಗಿ ಒಂದು ಕಡೆ ಇಡಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗಿತ್ತು. ಆಗ ಕಾಂಗ್ರೆಸ್‌ ಹೈಕಮಾಂಡ್‌ಗೆ ಕಾಣಿಸಿದ್ದು ಇದೇ ಡಿ.ಕೆ.ಶಿವಕುಮಾರ್‌. ಅಂದು ಡಿ.ಕೆ.ಶಿವಕುಮಾರ್‌ ಅವರು ಗುಜರಾತಿನ ಕಾಂಗ್ರೆಸ್‌ ಶಾಸಕರನ್ನು ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿಟ್ಟು ಕಾಪಾಡಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಿದ್ದರು. ಇದೇ ವೇಳೆ ಅವರ ಮನೆ ಮೇಲೆ ಐಟಿ-ಇಡಿ ದಾಳಿಯಾಗಿತ್ತು. ಅದಾದ ನಂತರ ಡಿ.ಕೆ.ಶಿವಕುಮಾರ್‌ ವಿರುದ್ಧ ಹಲವು ಕೇಸ್‌ಗಳು ದಾಖಲಾದವು. ಜೈಲು ಕೂಡಾ ಅನುಭವಿಸಿ ಬರಬೇಕಾಯಿತು. ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೇ ಡಿ.ಕೆ.ಶಿವಕುಮಾರ್‌ ಬಂಡೆಯಂತೆ ನಿಂತರು. ಪಕ್ಷ ಸಂಘಟನೆ ಮಾಡುತ್ತಾ ಹೋದರು.

ಕೊರೊನಾ ಸಮಯದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅವರು ಜನರ ಬಳಿಗೆ ಹೋದರು. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ರೈತರ ಜಮೀನುಗಳಿಗೆ ಹೋಗಿ ಅವರ ಕಷ್ಟಸುಖಗಳನ್ನು ವಿಚಾರಿಸಿದರು. ಹಾಗೆ ಶುರುವಾದ ಡಿ.ಕೆ.ಶಿವಕುಮಾರ್‌ ಹೋರಾಟ, ಮೇಕೆದಾಟು ಹೋರಾಟಕ್ಕೆ ಪ್ರೇರಣೆಯಾಯಿತು. ಬೆಂಗಳೂರಿಗೆ ನೀರೋದಗಿಸುವ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ಹಾಗೂ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಮೀನಾಮೇಷ ಎಣಿಸುತ್ತಿದ್ದರಿಂದ ಅವರು ಮೇಕೆದಾಟಿನಿಂದ ಬೆಂಗಳೂರಿನವರೆಗೆ ಎರಡು ಹಂತದಲ್ಲಿ ಬೃಹತ್‌ ಪಾದಯಾತ್ರೆ ನಡೆಸಿದರು. ಈ ವೇಳೆಯೂ ಹೋರಾಟ ಹತ್ತಿಕ್ಕುವ ಕೆಲಸ ನಡೆದರೂ ದೃತಿಗೆಡಲಿಲ್ಲ. ಅನಂತರ ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿಯವರಿಗೆ ಜೊತೆಯಾದರು. ಕರ್ನಾಟಕದಲ್ಲಿ ಸುಮಾರು 24 ದಿನಗಳ ಕಾಲ ಭಾರತ್‌ ಜೋಡೋ ಯಾತ್ರೆ ನಡೆಯಿತು. ಈ ವೇಳೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ನೋಡಿಕೊಂಡ ಕೀರ್ತಿ ಡಿ.ಕೆ.ಶಿವಕುಮಾರ್‌ ಅವರದ್ದು. ಇನ್ನು ರಾಹುಲ್‌ ಗಾಂಧಿಯವರನ್ನು ಇಡಿ ವಿಚಾರಣೆಗೆ ಕರೆದಾಗ ದೆಹಲಿಯಲ್ಲಿ ಹೋರಾಟಗಳು ನಡೆದವು. ಈ ವೇಳೆ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ದೆಹಲಿಯಲ್ಲಿ ನಿಂತು ದೊಡ್ಡ ಹೋರಾಟ ಸಂಘಟಿಸಿದರು. ಈ ಎಲ್ಲಾ ಕಾರಣಕ್ಕಾಗಿ ಹೈಕಮಾಂಡ್‌ಗೆ ಡಿ.ಕೆ.ಶಿವಕುಮಾರ್‌ ಮೇಲೆ ಒಲವಿದೆ. ಹೀಗಾಗಿ ಈ ಬಾರಿ ಡಿ.ಕೆ.ಶಿವಕುಮಾರ್‌ ಅವರೇ ಸಿಎಂ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದ್ರೆ, ಸಿದ್ದರಾಮಯ್ಯ ಇದು ನನಗೆ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ಅವರೂ ಕೂಡಾ ಪ್ರಬಲ ಸಿಎಂ ಆಕಾಂಕ್ಷಿ. ಅವರ ಪರವಾಗಿ 60 ರಿಂದ 70 ಶಾಸಕರು ನಿಲ್ಲುವ ಸಾಧ್ಯತೆ ಇದೆ. ಹಾಗೇನಾದರೂ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಪಟ್ಟುಹಿಡಿದರೆ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಬಹುದು. ಆಗ ಇಬ್ಬರಿಗೂ ಬೇಡ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಸ್ಥಾನ ತಂದು ಕೂರಿಸಬಹುದು. ಇಲ್ಲದೆ ಹೋದರೆ ಜಿ.ಪರಮೇಶ್ವರ್‌ರಂತಹ ಹಿರಿಯರು ಕೂಡಾ ಇದ್ದಾರೆ. ಏನೇ ಆದರೂ ಅಸಮಾಧಾನ ಇದ್ದೇ ಇರುತ್ತದೆ. ಆದ್ರೆ ಹೈಕಮಾಂಡ್‌ ಇದನ್ನು ಹೇಗೆ ಶಮನ ಮಾಡುತ್ತೆ ಅನ್ನೋದು ಮುಖ್ಯವಾಗುತ್ತೆ.

Share Post