ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತಕ್ಕೆ ತಾಯಿ ಬಲಿ
ಬೆಳಗಾವಿ; ತಾಯಿ ಮಕ್ಕಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುತ್ತಾಳೆ. ತಮ್ಮ ಕಣ್ಣ ಮುಂದೆಯೇ ಮಕ್ಕಳ ಸಾವನ್ನಪ್ಪಿದರೆ ಯಾವ ತಾಯಿಗೂ ತಡೆದುಕೊಳ್ಳುವ ಶಕ್ತಿಯೇ ಇರೋದಿಲ್ಲ. ಅದರಲ್ಲೂ ಕೆಲ ತಾಯಂದಿರುವ ಮಕ್ಕಳ ಸಾವಿನ ಕೊರಗಿನಲ್ಲೇ ಸಾವನ್ನಪ್ಪುತ್ತಾರೆ. ಅದೇ ರೀತಿ ಬೆಳಗಾವಿಯಲ್ಲಿ ತಾಯಿಯೊಬ್ಬಳು ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾಳೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಬಾಳಪ್ಪ ತಳವಾರ ಎಂಬುವವರು ಹಣ್ಣಿನ ವ್ಯಾಪಾರ ಮಾಡುತ್ತಾರೆ. ಹೀಗಾಗಿ ಅವರು, ಇಂದು ಸಂಜೆ ಹಣ್ಣು ಕೀಳಲೆಂದು ನೇರಳೆ ಮರ ಹತ್ತಿದ್ದರು. ಈ ವೇಳೆ ಅವರು ಮರದಿಂದ ಜಾರಿಬಿದ್ದು ಸಾವನ್ನಪ್ಪಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದರಿಂದ ಬಾಳಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸುದ್ದಿ ಬಾಳಪ್ಪ ಅವರ ತಾಯಿ ರುದ್ರವ್ವ ತಳವಾರ ಅವರ ಕಿವಿ ಮುಟ್ಟಿದೆ. ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹೆತ್ತ ಕರಳು ಮರುಗಿದೆ. ರುದ್ರವ್ವ ಅಲ್ಲೇ ಕುಸಿದುಬಿದ್ದಿದ್ದಾರೆ. ಆಕೆಗೆ ಹೃದಯಾಘಾತವಾಗಿದ್ದು ಸಾವನ್ನಪ್ಪಿದ್ದಾಳೆ.