DistrictsPolitics

ಐಸಿಸ್‌ ಸಂಪರ್ಕ ಇರುವ ವ್ಯಕ್ತಿ ಪಕ್ಕವೇ ಕೂತಿದ್ದರಾ ಸಿದ್ದರಾಮಯ್ಯ..?; ಈ ಆರೋಪ ನಿಜಾನಾ..?

ಬೆಳಗಾವಿ; ಡಿಸೆಂಬರ್‌ ನಾಲ್ಕರಂದು ಬೆಳಗಾವಿಯ ಬಾಷಾಪೀರ್‌ ದರ್ಗಾ ಬಳಿ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮಾವೇಶ ನಡೆದಿತ್ತು. ಇದರಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಐಸಿಸ್‌ ಸಂಪರ್ಕ ಇರುವ ವ್ಯಕ್ತಿ ಕೂತಿದ್ದರಂತೆ. ಇಂಥಹದ್ದೊಂದು ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ಆರೋಪ ಮಾಡಿರೋದು ಬೇರ್ಯಾರೂ ಅಲ್ಲ, ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌.

ಬೆಳಗಾವಿಯಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಬೆಳಗಾವಿಯಲ್ಲಿ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಐಸಿಸ್‌ ಸಂಪರ್ಕ ಹೊಂದಿರುವ ವ್ಯಕ್ತಿ ಜೊತೆ ವೇದಿಕೆ ಹಂಚಿಕೊಂಡಿದ್ದರು. ಆ ವ್ಯಕ್ತಿಯನ್ನು ಸಿದ್ದರಾಮಯ್ಯ ಪಕ್ಕದಲ್ಲೇ ಕೂರಿಸಿಕೊಂಡಿದ್ದರು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರ ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲವೇ..? ಆ ವ್ಯಕ್ತಿಗೆ ಐಸಿಸ್‌ ಸಂಪರ್ಕ ಇತ್ತು ಅನ್ನೋದು ತಿಳಿದಿರಲಿಲ್ಲವೇ ಎಂದು ಯತ್ನಾಳ್‌ ಪ್ರಶ್ನೆ ಮಾಡಿದ್ದಾರೆ.

ಎಲ್ಲಾ ಮಾಹಿತಿ ಪಡೆದುಕೊಂಡೇ ನಾನು ಈ ಗಂಭೀರ ಆರೋಪ ಮಾಡುತ್ತಿದ್ದೇನೆ. ಭಯೋತ್ಪಾದಕರ ಜೊತೆ ಸಂಪರ್ಕ ಇರುವವರು ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದು ಖಂಡನೀಯ. ನಾನು ಹುಡುಗಾಟಿಕೆಗೆ ಹೇಳಿಕೆ ನೀಡುತ್ತಿಲ್ಲ. ಇನ್ನೊಂದು ವಾರದಲ್ಲಿ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ ಎಂದೂ ಯತ್ನಾಳ್‌ ಬಾಂಬ್‌ ಸಿಡಿಸಿದ್ದಾರೆ.

ಪ್ರಧಾನಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿ ಯಾರ್ಯಾರಿರುತ್ತಾರೆ ಎಂಬ ಮಾಹಿತಿ ಇರುತ್ತದೆ. ಅದೇ ರೀತಿ ಸಿಎಂ ಹೋಗುವ ಕಾರ್ಯಕ್ರಮದಲ್ಲಿ ಯಾರ್ಯಾರಿರುತ್ತಾರೆ ಎಂಬ ಮಾಹಿತಿ ಇರಲಿಲ್ಲವಾ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನಿಸಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಸಿಎಂ ಮೇಲೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದು, ರಾಜಕೀಯವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಆದ್ರೆ ನಿಜಕ್ಕೂ ಸಿದ್ದರಾಮಯ್ಯ ಪಕ್ಕ ಐಸಿಸ್‌ ಸಂಪರ್ಕ ಇರುವ ವ್ಯಕ್ತಿ ಕುಳಿತಿದ್ದರಾ ಎಂಬುದಕ್ಕೆ ಯತ್ನಾಳ್‌ ಯಾವುದೇ ದಾಖಲೆ ಕೊಟ್ಟಿಲ್ಲ. ಅದಕ್ಕೆ ಒಂದು ವಾರ ಬೇಕು ಎಂದಿದ್ದಾರೆ. ಇದು ನಿಜವೋ, ಸುಳ್ಳೋ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕು.

Share Post