BengaluruNationalPolitics

ಕರ್ನಾಟಕದಿಂದ ಸೋನಿಯಾ ರಾಜ್ಯಸಭೆಗೆ, ರಾಹುಲ್‌ ಲೋಕಸಭೆಗೆ; ಏನಿದು ರಾಜ್ಯ ಕಾಂಗ್ರೆಸ್‌ ಪ್ಲ್ಯಾನ್‌..?

ಬೆಂಗಳೂರು; ಉತ್ತರ ಪ್ರದೇಶದಿಂದ ಸ್ಪರ್ಧೆ ಮಾಡುತ್ತಿದ್ದ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಬರುತ್ತಾರಾ..?. ಈ ಪ್ರಶ್ನೆ ರಾಜ್ಯ ರಾಜಕೀಯ ವಲಯದಲ್ಲಿ ಎದ್ದಿದೆ. ಮೂಲಗಳ ಪ್ರಕಾರ, ರಾಜ್ಯದಿಂದ ಸೋನಿಯಾ ಗಾಂಧಿಯವರನ್ನು ರಾಜ್ಯಸಭೆಗೆ ಕಳುಹಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ರಾಹುಲ್‌ ಗಾಂಧಿಯವರು ಕೂಡಾ ರಾಜ್ಯದಿಂದಲೇ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆಂಬ ಮಾತುಗಳೂ ಕೇಳಿಬರುತ್ತಿವೆ.

ಸೋನಿಯಾಗಾಂಧಿಯವರು ಈ ಹಿಂದೆ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆದ್ರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಕ್ಕೆ ಅವರಿಗೆ ಅನಾರೋಗ್ಯ ಅಡ್ಡಿಯಾಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾಗಾಂಧಿಯವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು ಸೋನಿಯಾಗಾಂಧಿಯವರ ಮನವೊಲಿಸಿ, ರಾಜ್ಯದಿಂದ ಸೋನಿಯಾಗಾಂಧಿಯವರನ್ನು ರಾಜ್ಯಸಭೆಗೆ ಕಳುಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

2024ರ ಏಪ್ರಿಲ್​ನಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ 4 ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿವೆ. ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಡಾ.ಎಲ್‌.ಹನುಮಂತಯ್ಯ, ನಾಸಿರ್‌ ಹುಸೇನ್‌, ಜಿ.ಸಿ.ಚಂದ್ರಶೇಖರ್‌ ಹಾಗೂ ಬಿಜೆಪಿಯಿಂದ ಆಯ್ಕೆಯಾಗಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಚಂದ್ರಶೇಖರ್‌ ಅವಧಿ ಏಪ್ರಿಲ್‌ಗೆ ಅಂತ್ಯವಾಗಲಿದೆ. ಇದರಲ್ಲಿ ಮೂರು ಸ್ಥಾನಗಳನ್ನು ಕಾಂಗ್ರೆಸ್‌ ಸುಲಭವಾಗಿ ಗೆಲ್ಲಬಹುದು. ಈ ಹಿನ್ನೆಲೆಯಲ್ಲಿ ಸೋನಿಯಾಗಾಂಧಿಯವರನ್ನು ಒಪ್ಪಿಸಿ, ರಾಜ್ಯದಿಂದ ಅವರನ್ನು ರಾಜ್ಯಸಭೆಗೆ ಕಳುಹಿಸುವ ರಾಜ್ಯ ನಾಯಕರಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಇತಿಹಾಸವನ್ನು ತಿರುವಿ ಹಾಕಿದರೂ ಹಲವಾರು ಮಂದಿ ಬೇರೆ ರಾಜ್ಯದ ನಾಯಕರು ರಾಜ್ಯದಿಂದ ರಾಜ್ಯಸಭೆಗೆ ಹೋಗಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್‌ ಅವರು ಸತತ ಎರಡು ಬಾರಿ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ವೆಂಕಯ್ಯನಾಯ್ಡು ಅವರು ಕೂಡಾ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇನ್ನು ಕೇರಳ ಮೂಲದ ರಾಜೀವ್‌ ಚಂದ್ರಶೇಖರ್‌ ಅವರು ಕೂಡಾ ಸತತ ಮೂರನೇ ಬಾರಿ ರಾಜ್ಯದಿಂದ ರಾಜ್ಯಸಭೆಗೆ ಹೋಗಿದ್ದಾರೆ. ಹೀಗಾಗಿ ಅನ್ಯ ರಾಜ್ಯದವರು ರಾಜ್ಯದಿಂದ ರಾಜ್ಯಸಭೆಗೆ ಹೋಗೋದು ಹೊಸದೇನಲ್ಲ.

ಇನ್ನೊಂದೆಡೆ ಉತ್ತರ ಭಾರತಕ್ಕೆ ಹೋಲಿಸಿಕೊಂಡರೆ, ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಪ್ರಬಲವಾಗುತ್ತಿದೆ. ಹೀಗಾಗಿ, ಕಾಂಗ್ರೆಸ್‌ ವರಿಷ್ಠರು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ ಹೆಚ್ಚು ಸ್ಥಾನಗಳನ್ನು ನಿರೀಕ್ಷೆ ಮಾಡಿದ್ದಾರೆ. ಈ ನಡುವೆ ಸೋನಿಯಾ ಗಾಂಧಿ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ, ರಾಹುಲ್‌ ಗಾಂಧಿ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದರೆ, ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಗೆ ಮತ್ತಷ್ಟು ಶಕ್ತಿ ಬರಲಿದೆ ಎಂಬ ವಿಶ್ವಾಸ ರಾಜ್ಯ ಕಾಂಗ್ರೆಸ್‌ ನಾಯಕರದ್ದು.

ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಅಮೇಥಿ ಕ್ಷೇತ್ರಗಳಿಂದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಸ್ಪರ್ಧೆ ಮಾಡುತ್ತಾ ಬಂದಿದ್ದರು. ಆದ್ರೆ ಕಳೆದ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸೋಲನುಭವಿಸಿದ್ದರು. ಕೇರಳದಿಂದ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ರಾಹುಲ್‌ ಗಾಂಧಿ ಅಲ್ಲಿ ಗೆದ್ದಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣವಿಲ್ಲ. ಹೀಗಾಗಿ ಅಲ್ಲಿ, ರಾಹುಲ್‌ ಗಾಂಧಿ ಸ್ಪರ್ಧೆ ಮಾಡುವುದು ಅನುಮಾನ. ಇನ್ನು ಕರ್ನಾಟಕವಾದರೆ ರಾಹುಲ್‌ ಗಾಂಧಿ ಗೆಲ್ಲಲು ಸುಲಭವಾಗುತ್ತದೆ ಎಂಬ ಲೆಕ್ಕಾಚಾರವಿದೆ.

ಅಂದಹಾಗೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನ ಬಂದಿದೆ ಅಷ್ಟೇ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿ ಡಿ.ಕೆ.ಸುರೇಶ್‌ ಆಯ್ಕೆಯಾಗಿದ್ದಾರೆ. ಆದ್ರೆ ಈ ಬಾರಿ ಡಿ.ಕೆ.ಸುರೇಶ್‌ ಅಲ್ಲಿಂದ ಸ್ಪರ್ಧೆ ಮಾಡೋದಿಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತಲೇ ಇವೆ. ಈಗಿನ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವೊಂದೇ ಕಾಂಗ್ರೆಸ್‌ಗೆ ಸೇಫ್‌ ಕ್ಷೇತ್ರ. ಹೀಗಾಗಿ ಡಿ.ಕೆ.ಸುರೇಶ್‌ ಅವರು ರಾಹುಲ್‌ ಗಾಂಧಿಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಟ್ಟುಕೊಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

 

Share Post