ರಾಜ್ಯಪಾಲರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಓಪನ್; ಪೊಲೀಸರಿಗೆ ದೂರು
ಬೆಂಗಳೂರು; ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಮೋಸ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದ್ರಲ್ಲೂ ಗಣ್ಯರ ಹೆಸರಿನಲ್ಲಿ ಕನಲಿ ಖಾತೆಗಳನ್ನು ಸೃಷ್ಟಿ ಮಾಡಿ, ದುರುಪಯೋಗಪಡಿಸಿಕೊಳ್ಳುವ ಪ್ರಯತ್ನಗಳೂ ನಡೆಯಲಿವೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಹೆಸರಿನಲ್ಲೂ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದೆ. ಈ ಸಂಬಂಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಹೆಸರು, ಫೋಟೋ ಬಳಸಿಕೊಂಡು ಫೇಸ್‌ಬುಕ್ ಖಾತೆ ತೆರೆಯಲಾಗಿದೆ. ಯಾರೋ ಅಪರಿಚಿತರು ಈ ಕೆಲಸ ಮಾಡಿದ್ದಾರೆ. ಹೀಗೆ ನಕಲಿ ಖಾತೆ ತೆರೆದು, ಹಣವನ್ನು ಕೇಳುವ, ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ರೀತಿ ರಾಜ್ಯಪಾಲರ ಖಾತೆಯನ್ನೂ ದುರುಪಯೋಗ ಮಾಡಿಕೊಳ್ಳಲು ಮುಂದಾಗಿರಬಹುದೆಂದು ಶಂಕಿಸಲಾಗಿದೆ. ಈಗಾಗಲೇ ದೂರು ದಾಖಲಿಸಿಕೊಂಡಿರುವ ಪೊಲೀಸರು, ರಾಜ್ಯಪಾಲರ ಹೆಸರಿನ ನಕಲಿ ಫೇಸ್‌ಬುಕ್ ಖಾತೆಯನ್ನು ಕ್ಲೋಸ್ ಮಾಡಿಸಿದ್ದಾರೆ.
ಇದೀಗ ಆ ಖಾತೆ ತೆರೆದವರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಖಾತೆ ತೆರೆದಿದ್ದು ಯಾರು..?, ಇದರ ಹಿಂದಿನ ಉದ್ದೇಶ ಏನು..? ಇತ್ಯಾದಿಗಳ ಬಗ್ಗೆ ತನಿಖೆ ನಡೆಯುತ್ತಿದೆ.