DistrictsLifestyle

ಎಣ್ಣೆ ಪ್ರಿಯರ ಪ್ರೊಟೆಸ್ಟ್;‌ ಬೆಳಗ್ಗೆ ನೈಂಟಿ, ಸಂಜೆ ನೈಂಟಿ ಎಣ್ಣೆ ಫ್ರೀ ಬೇಕಂತೆ..!

ಉಡುಪಿ; ಮದ್ಯದ ಬೆಲೆ ಇಳಿಕೆ ಮಾಡಿ, ಇಲ್ಲದಿದ್ದರೆ ಬೆಳಗ್ಗೆ ನೈಂಟಿ ಹಾಗೂ ಸಂಜೆ ನೈಂಟಿ ಉಚಿತವಾಗಿ ಕೊಡಿ. ಇದು ಮದ್ಯ ಪ್ರಿಯರು ಸರ್ಕಾರಕ್ಕೆ ಇಟ್ಟಿರುವ ಬೇಡಿಕೆ. ಜುಲೈ 7 ರಂದು ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಮದ್ಯದ ಮೇಲೆ ಶೇ.20ರಷ್ಟು ತೆರಿಗೆ ಏರಿಕೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಉಡುಪಿಯಲ್ಲಿ ಕೂಲಿ ಕಾರ್ಮಿಕರು ವಿನೂತನ ಪ್ರತಿಭಟನೆ ನಡೆಸಿದರು. ಚಿತ್ತರಂಜನ್‌ ಸರ್ಕಲ್‌ನಲ್ಲಿ ಸೇರಿದ್ದ ಮದ್ಯಪ್ರಿಯರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಸರ್ಕಾರ ಹಲವಾರು ಉಚಿತ ಯೋಜನೆಗಳನ್ನು ಜಾರಿ ಮಾಡಿದೆ. ಅದಕ್ಕೆಲ್ಲಾ ನಮ್ಮಿಂದಲೇ ಹಣ ಬರೋದು. ಹಾಗಿದ್ಮೇಲೆ ನಮಗೂ ಬೆಳಗ್ಗೆ ನೈಂಟಿ ಹಾಗೂ ಸಂಜೆ ನೈಂಟಿ ಮದ್ಯ ಉಚಿತವಾಗಿ ಕೊಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇಲ್ಲದೇ ಹೋದರೆ ರಾಜ್ಯದಲ್ಲಿ ಮದ್ಯವನ್ನು ಸಂಪೂರ್ಣವಾಗಿ ಬಂದ್‌ ಮಾಡಿ. ಆಗ ನಾವು ನಮ್ಮ ಹೆಂಡತಿ, ಮಕ್ಕಳಿಗೆ ಹಣ ಕೊಡುತ್ತೇವೆ. ನಾವೇ ಅವರನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೇವೆ ಎಂದರು.

ಅಬಕಾರಿ ಸುಂಕ ಹೆಚ್ಚಳ ಮಾಡಿ ಕಾಂಗ್ರೆಸ್ ಸರ್ಕಾರ ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟಿದೆ. ಜು.7ರ ಶುಕ್ರವಾರ ಮಂಡನೆಯಾದ ಬಜೆಟ್​ನಲ್ಲಿ ಮದ್ಯದ ಬೆಲೆ ಹೆಚ್ಚಳ ಮಾಡಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ರೊಚ್ಚಿಗೆದ್ದ ಮದ್ಯ ಪ್ರಿಯರು ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಉಚಿತ ಮದ್ಯ ನೀಡುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲಾ ನಾಗರಿಕ ಸಮಿತಿ, ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕುಡುಕರಿಗೆ ಹಾರ ಹಾಕಿ ಸನ್ಮಾನ ಮಾಡಲಾಯಿತು. ಹಾಗೂ ಆರತಿ ಎತ್ತಿ ಗೌರವಾರ್ಪಣೆ ಸಲ್ಲಿಸಲಾಯಿತು.

Share Post