ಅಕ್ಟೋಬರ್ 13ರಿಂದ ಹಾಸನಾಂಬೆ ಜಾತ್ರೆ; ಶಾಸಕ ಪ್ರೀತಂಗೌಡ
ಹಾಸನ; ಹಾಸನಾಂಬೆ ಜಾತ್ರಾ ಮಹೋತ್ಸವ ಅಕ್ಟೋಬರ್ 13 ರಿಂದ 27 ರವರೆಗೆ ನಡೆಯಲಿದೆ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. ಹಾಸನಂಬ ಜಾತ್ರೆ ಹಿನ್ನೆಲೆಯಲ್ಲಿ ಇಂದು ದೇವಾಲಯ ಆವರಣ ಪರಿಶೀಲನೆ ನಂತರ ಮಾತನಾಡಿದ ಅವರು, ವರ್ಷಕೊಮ್ಮೆ ಕೆಲವು ದಿನಗಳು ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ದೇವಾಲಯದ ಗರ್ಭಗುಡಿ ಆಶ್ವೀಜ ಮಾಸದ ಮೊದಲ ಗುರುವಾರ ತೆರೆಯಲಾಗುತ್ತದೆ ಎಂದರು.
ಈ ಬಾರಿ 15 ದಿನಗಳು ದೇಗುಲದ ಬಾಗಿಲು ತೆರೆಯಲಿದ್ದು, ಭಕ್ತರಿಗೆ 12 ದಿನಗಳು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 15 ದಿನಗಳಲ್ಲಿ ಮೊದಲ ಮತ್ತು ಕೊನೆಯ ದಿನ ಹಾಗೂ ಗ್ರಹಣ ಇರುವುದರಿಂದ ಅಕ್ಟೋಬರ್ 25 ರಂದು ಸಾರ್ವಜನಿಕರಿಗೆ ದರ್ಶನ ಅವಕಾಶ ಇರುವುದಿಲ್ಲ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.ಕೋವಿಡ್–19 ನಿಂದಾಗಿ ಎರಡು ವರ್ಷ ಸರಳವಾಗಿ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಜರುಗಿದ್ದು, ಈ ಬಾರಿ ಅದ್ಧೂರಿಯಾಗಿ ಆಯೋಜಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಹೊರ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ಮೂಲಸೌಕರ್ಯ ಸೇರಿದಂತೆ ಅಚ್ಚುಕಟ್ಟಾದ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ .