ಸಿದ್ದರಾಮಯ್ಯ ಬದಾಮಿಯಿಂದ ಸ್ಪರ್ಧಿಸುವುದು ಕಷ್ಟ; ಯತೀಂದ್ರ ಸಿದ್ದರಾಮಯ್ಯ
ಬಾದಾಮಿ; ನಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಬದಾಮಿ ಕ್ಷೇತ್ರಕ್ಕೆ ಭೇಟಿ ನೀಡಲು ತುಂಬಾ ದೂರ ಆಗುತ್ತಿದೆ. ಕಾಲಕಾಲಕ್ಕೆ ಸಾರ್ವಜನಿಕರನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದು ಕಷ್ಟ ಎಂದು ಸಿದ್ದರಾಮಯ್ಯ ಅವರ ಪುತ್ರ ಹಾಗೂ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ದೂರ ಇರುವುದರಿಂದ ಅವರಿಗೆ ಕಷ್ಟವಾಗುತ್ತಿದೆ. ಆದ್ರೆ, ಇಲ್ಲಿನ ಜನರ ಒತ್ತಾಯದ ಹಿನ್ನೆಲೆಯಲ್ಲಿ ಕಷ್ಟವಾದರೂ ಇಲ್ಲಿಂದಲೇ ಸ್ಪರ್ಧಿಸುವಂತೆ ಅವರಿಗೆ ಮನವಿ ಮಾಡುವೆ ಎಂದು ಹೇಳಿದರು. ನಮ್ಮ ತಂದೆ ಸಿದ್ದರಾಮಯ್ಯ ಅವರನ್ನು ಈ ಕ್ಷೇತ್ರದಲ್ಲಿ ಜನರು ಆಯ್ಕೆ ಮಾಡಿ ಕಳಿಸಿದ್ದೀರಿ. ನಿಮ್ಮ ಋಣ ನಮ್ಮ ಕುಟುಂಬದ ಮೇಲಿದೆ. ನಮ್ಮ ತಂದೆಯವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ ಎಂದು ಡಾ. ಯತೀಂದ್ರ ಅವರು ಹೇಳಿದ್ದಾರೆ. ಮುಖಂಡರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿ ಅವರು ಮಾತನಾಡಿದರು. ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಇಲ್ಲಿಂದಲೇ ಸ್ಪರ್ಧಿಸಲಿ’ ಎಂದು ಮುಖಂಡ ಎಂ.ಬಿ. ಹಂಗರಗಿ, ಹೊಳೆಬಸು ಶೆಟ್ಟರ್ ಒತ್ತಾಯಿಸಿದರು. ಕಷ್ಟವಾದರೂ ಬದಾಮಿ ಯಲ್ಲಿಯೇ ಸ್ಪರ್ಧಿಸಲು ಹೇಳುವೆ ಎಂದು ಯತೀಂದ್ರ ಉತ್ತರಿಸಿದರು.