ಯಾದಗಿರಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ; ಪಾಕ್‌ಗೆ ಕರೆ!
ಯಾದಗಿರಿ; ಉಗ್ರ ಚಟುವಟಿಕೆ ನಡೆಸುವವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಸ್ಯಾಟಲೈಟ್ ಫೋನ್ ಬಳಕೆ ಮಾಡ್ತಾರೆ. ರಾಜ್ಯದಲ್ಲೂ ಕೂಡಾ ಆಗಾಗ ಈ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ಬಗ್ಗೆ ವರದಿಯಾಗುತ್ತಿರುತ್ತದೆ. ಎರಡು ವರ್ಷದ ಹಿಂದೆ ಕೂಡಾ ಯಾದಗಿರಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿತ್ತು. ಇದೀಗ ಅದೇ ಯಾದಗಿರಿಯಿಂದ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾಕ್ಕೆ ಕರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಫುಲ್ ಅಲರ್ಟ್ ಆಗಿವೆ.
ಸೆಪ್ಟೆಂಬರ್ 17ರಂದು ಯಾದಗಿರಿ ಬಳಿಯ ಶೆಳ್ಳಗಿ ಗ್ರಾಮದ ಕೃಷಿ ಭೂಮಿಯಿಂದ ಬೆಳಗಿನಜಾವ 3 ಗಂಟೆ ಸಮಯದಲ್ಲಿ ಪಾಕಿಸ್ತಾನಕ್ಕೆ ಕರೆ ಮಾಡಲಾಗಿದೆ. ಇದಕ್ಕಾಗಿ ಸ್ಯಾಟಲೈಟ್ ಫೋನ್ ಬಳಕೆ ಮಾಡಲಾಗಿದೆಯಂತೆ. ಈ ವಿಚಾರ ಈಗ ಬೆಳಕಿಗೆ ಬಂದಿದೆ. ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದೇ ಈ ಕರೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇದಕ್ಕಾಗಿ ಚೀನಾ ನಿರ್ಮಿತ ಸ್ಯಾಟಲೈಟ್ ಫೋನ್ ಬಳಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 19ರಂದು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
2021ರಲ್ಲಿ ಯಾದಗಿರಿ ತಾಲ್ಲೂಕಿನ ಹೆಡಗಿಮದ್ರಾ ಗ್ರಾಮದ ಬಳಿಯಿಂದ ಪಾಕಿಸ್ತಾನಕ್ಕೆ ಕರೆ ಮಾಡಲಾಗಿತ್ತು. ಇದೀಗ ಮತ್ತೆ ಅದೇ ಯಾದಗಿರಿಯಿಂದ ಪಾಕಿಸ್ತಾನಕ್ಕೆ ಕರೆಹೋಗಿದೆ. ಇನ್ನೊಂದೆಡೆ ಹತ್ತು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಇದೇ ಯಾದಗಿರಿಯಲ್ಲಿ ಮೋಸ್ಟ್ ವಾಂಟೆಡ್ ಉಗ್ರರು ಅಡಗಿದ್ದನ್ನು ಕೂಡಾ ಇಲ್ಲಿ ನೆನಪಿಸಿಕೊಳ್ಳಬಹುದು. ಹೀಗಾಗಿ, ಯಾದಗಿರಿಯಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.