ಪಿಎಸ್‌ಐ ಅಕ್ರಮ ಪ್ರಕರಣ; ದಿವ್ಯಾ ಹಾಗರಗಿ ಸೇರಿ ಐವರ ಅರೆಸ್ಟ್
ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಕೊನೆಗೂ ಬಂಧನವಾಗಿದ್ದಾರೆ. ಸಿಐಡಿ ಅಧಿಕಾರಿಗಳು ದಿವ್ಯಾ ಹಾಗರಗಿ ಸೇರಿ ಐವರನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಅಡಗಿದ್ದ ಐವರನ್ನು ಸಿಐಡಿ ಎಸ್ಪಿ ರಾಘವೇಂದ್ರ ನೇತೃತ್ವದ ತಂಡ ಬಂಧಿಸಿದೆ.
ಪುಣೆಯಲ್ಲಿ ದಿವ್ಯಾ ಮತ್ತು ಆಕೆಯ ಸಹಚರರು ಅಡಗಿದ್ದಾರೆಂಬ ಮಾಹಿತಿ ಸಿಐಡಿಗೆ ಸಿಕ್ಕಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ದಿವ್ಯಾ, ಜ್ಞಾನಜ್ಯೋತಿ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್, ಮೇಲ್ವಿಚಾರಕಿ ಅರ್ಚನಾ, ಸುನಂದಾ, ಪಿಎಸ್ಐ ಪರೀಕ್ಷಾರ್ಥಿ ಅಭ್ಯರ್ಥಿ ಶಾಂತಾಬಾಯಿ ಅವರನ್ನು ಅರೆಸ್ಟ್ ಮಾಡಿದೆ.
ಗುರುವಾರ ಆರೋಪಿ ಜ್ಯೋತಿ ಪಾಟೀಲ್ ಬಂಧನವಾಗಿತ್ತು. ವಿಚಾರಣೆ ವೇಳೆ ದಿವ್ಯಾ ಸೇರಿ ಎಲ್ಲರೂ ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿರುವುದನ್ನು ಜ್ಯೋತಿ ಪಾಟೀಲ್ ಬಾಯ್ಬಿಟ್ಟಿದ್ದರು. ತಡ ಮಾಡದೇ ರಾತ್ರಿಯೇ ಪುಣೆಗೆ ತೆರಳಿದ ಸಿಐಡಿ ತಂಡ, ಶೋಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿಯಾದ ದಿವ್ಯಾ ಹಾಗರಗಿ ಅವರು ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಹೊರಬೀಳುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಸಿಐಡಿ ಸಾಕಷ್ಟು ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ, ಬಂಧನಕ್ಕಾಗಿಯೇ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕಡೆಗೂ 18 ದಿನಗಳ ನಂತರ ಖಾಕಿ ಖೆಡ್ಡಾಕೆ ಬಿದ್ದಿದ್ದಾರೆ.