ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ; ಸಿಎಂ ಬೊಮ್ಮಾಯಿ
ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ. ನಾಳೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ಆದ್ರೆ ಹೈಕಮಾಂಡ್ ಭೇಟಿಯಾಗುತ್ತಿಲ್ಲ. ಸಂಪುಟದ ಬಗ್ಗೆ ಚರ್ಚೆಗೆ ಹೈಕಮಾಂಡ್ ಯಾವಾಗ ಕರೆಯುತ್ತದೆಯೋ, ಅಂದು ಹೋಗಿ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತಣಾಡಿದ ಅವರು, ಸಂಪುಟದ ಬಗ್ಗೆ ಚರ್ಚೆಗೆ ಹೈಕಮಾಂಡ್ನಿಂದ ಆಹ್ವಾನ ಬಂದಾಗ ದೆಹಲಿಗೆ ಹೋಗುತ್ತೇನೆ ಎಂದರು. ರಾಜ್ಯದಲ್ಲಿ ಮತ್ತೆ ಸಾರಿಗೆ ಮುಷ್ಕರ ವಿಚಾರವನ್ನು ಸಾರಿಗೆ ಸಚಿವರು ನೋಡಿಕೊಳ್ಳುತ್ತಾರೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಹೆಸರು ಇಡುವ ವಿಚಾರ ನಮ್ಮ ಮುಂದಿದೆ. ಇಲ್ಲಿಯ ಎಲ್ಲ ನಾಯಕರ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಬೆಳಗಾವಿ ಜಿಲ್ಲೆಯ ವಿಭಜನೆ ಬಗ್ಗೆ ಇನ್ನೂ ಯಾವುದೇ ನಿರ್ಣಯ ಮಾಡಿಲ್ಲ, ಈ ಬಗ್ಗೆ ಅನೇಕ ವರ್ಷಗಳಿಂದ ಚರ್ಚೆ ಇದೆ ಎಂದರು.
ಎರಡು, ಮೂರು ಜಿಲ್ಲೆಗಳ ವಿಭಜನೆ ಬಗ್ಗೆ ಪ್ರಸ್ತಾಪ ಇದೆ. ಗಡಿ ಭಾಗದ ಜಿಲ್ಲೆ ಇದಾಗಿದ್ದು, ವಿಭಜನೆ ಬೇಡ ಎಂದು ಜೆ.ಹೆಚ್.ಪಟೇಲ್ ಸಿಎಂ ಇದ್ದಾಗ ಹೇಳಿದ್ದರು. ಈಗ ಮತ್ತೆ ಜನರು ಒತ್ತಾಸೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜಿಲ್ಲೆಗಳ ಹಿತದೃಷ್ಟಿಯಿಂದ ಈ ಬಗ್ಗೆ ನಾವು ನಿರ್ಣಯ ಮಾಡುತ್ತೇವೆ ಎಂದು ತಿಳಿಸಿದರು.