ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ವಿರೋಧಿಸಿ ನಂಜನಗೂಡಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ
ಮೈಸೂರು; ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ನಂಜನಗೂಡಿನಲ್ಲಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ. ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಗಿದ್ದು, ನಂಜನಗೂಡು ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ಮಾತನಾಡಿ, ರಾಜ್ಯದಲ್ಲಿರುವ ಜಲಾಶಯಗಳ ನೀರಿನ ಮಟ್ಟವನ್ನು ನೋಡದೆ ಕೇಂದ್ರ ಸರ್ಕಾರ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಆದೇಶ ನೀಡಿದೆ. ಕೇಂದ್ರ ಸರ್ಕಾರವು ತಮಿಳುನಾಡಿನಲ್ಲಿರುವ ಪ್ರಾದೇಶಿಕ ಪಕ್ಷವನ್ನು ಓಲೈಕೆ ಮಾಡಲು ನೀರು ಬಿಟ್ಟಿದ್ದಾರೆ.
ರಾಜ್ಯದ ರೈತರಿಗೆ ಸೂಕ್ತ ಕಾಲದಲ್ಲಿ ಬೆಳೆ ಬೆಳೆಯಲು ನೀರು ಬಿಡದೆ ಪಕ್ಕದ ರಾಜ್ಯಕ್ಕೆ ನೀರು ಬಿಟ್ಟಿರುವುದು ಅತ್ಯಂತ ಖಂಡನೀಯ. ಕೂಡಲೆ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು. ನಮ್ಮ ರೈತರ ಗದ್ದೆಗಳಿಗೆ ನೀರು ಬಿಡಬೇಕು ಇಲ್ಲದಿದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಕಿಲೋ ಮೀಟರ್ ದೂರದ ತನಕ ವಾಹನಗಳು ನಿಂತಿದ್ದವು. ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಕೆಲವು ಬೈಕ್ ಸವಾರರು ಮಾತಿನ ಚಕಮಕಿಯನ್ನು ನಡೆಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ವಾತಾವರಣವನ್ನು ತಿಳಿಗೊಳಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ತಾಲೂಕು ಅಧ್ಯಕ್ಷ ಸತೀಶ್, ವೇಣು, ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು ಎಂದು ಹೇಳಿದ್ದಾರೆ.