ಫೆಬ್ರವರಿ 27ಕ್ಕೆ ಬೆಳಗಾವಿಗೂ ಬರಲಿದ್ದಾರೆ ಮೋದಿ; ಕುಂದಾನಗರಿಯಲ್ಲಿ ಬೃಹತ್ ಸಮಾವೇಶ
ಬೆಳಗಾವಿ; ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅವರು ಬೆಳಗಾವಿಗೂ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅಂದು ಬೆಳಗಾವಿ ರೈಲು ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ರೈತ ಸನ್ಮಾನ ನಿಧಿಯ ಎರಡನೇ ಕಂತಿನ ಹಣವನ್ನು ಕೂಡಾ ಬಿಡುಗಡೆ ಮಾಡಲಿದ್ದಾರೆ.
ಶಿವಮೊಗ್ಗ ಕಾರ್ಯಕ್ರಮ ಮುಗಿದ ಮೇಲೆ ಅವರು ಬೆಳಗಾವಿಗೆ ಬರಲಿದ್ದಾರೆ. ಅಂದು ಬೆಳಗಾವಿಯಲ್ಲಿ ಬೃಹತ್ ಬಹಿರಂಗ ಸಮಾವೇಶ ಏರ್ಪಡಿಸಲಾಗಿದೆ. ಸರ್ಕಾರಿ ಕಾರ್ಯಕ್ರಮವಾದರೂ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 2 ಲಕ್ಷ ಜನರನ್ನು ಸೇರಿಸಲು ಪ್ಲ್ಯಾನ್ ಮಾಡಲಾಗಿದೆ. ಅಂದು ಮಧ್ಯಾಹ್ನ 2.15ರಿಂದ 3.30ರವರೆಗೆ ಬೆಳಗಾವಿಯಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಸಲಾಗುತ್ತದೆ. ಸಾವಗಾವ್, ಜಿಲ್ಲಾ ಕ್ರೀಡಾಂಗಣ, ಮಾಲಿನಿ ಗಾರ್ಡನ್, ಸಿಪಿಎಡ್ ಮೈದಾನ ಭದ್ರತಾ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ಬಳಿಕ ಸಮಾವೇಶದ ಸ್ಥಳ ನಿಗದಿ ಆಗಲಿದೆ.