ವಲಸಿಗರಷ್ಟೇ ಅಲ್ಲ, ಯಾರೇ ಬಂದರೂ ಕಾಂಗ್ರೆಸ್ಸಿಗೆ ಸ್ವಾಗತಿಸುತ್ತೇವೆ; ಸಿಎಂ ಸಿದ್ದರಾಮಯ್ಯ
ಮೈಸೂರು; ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿರುವವರು ವಾಪಸ್ ಬರೋದಾದರೆ ಸ್ವಾಗ ಮಾಡುತ್ತೇವೆ. ಅವರಷ್ಟೇ ಅಲ್ಲ, ಯಾರೇ ಬಂದರೂ ಕಾಂಗ್ರೆಸ್‌ಗೆ ಪಕ್ಷಕ್ಕೆ ಸ್ವಾಗತವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ಮೂವತ್ತರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರು ಮೈಸೂರು ಪ್ರವಾಸ ಕೈಗೊಂಡಿದ್ದು, ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಇಲ್ಲವೇ ಇಲ್ಲ. ಅದು ದಿವಾಳಿಯಾಗಿದೆ. ಈವರೆಗೂ ಅವರಿಗೆ ವಿಪಕ್ಷ ನಾಯಕ ಆಯ್ಕೆ ಮಾಡೋದಕ್ಕೆ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೇ ನನ್ನ ಭೇಟಿಗೆ ಬರಬೇಡಿ ಎಂದು ಹೇಳಿದ್ದಾರೆಂತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಆಗಸ್ಟ್ 30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದ್ದು, ಅಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಜನರು ಆಗಮಿಸಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಅಂದೇ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.