ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿರುವ ಅನ್ಯಾಯ ಯಾರೂ ಮಾಡಿರಲಿಲ್ಲ; ಡಿ.ಕೆ.ಶಿವಕುಮಾರ್
ವಿಜಯಪುರ; ರಾಜ್ಯದ ಜನರಿಗೆ ಬಿಜೆಪಿ ಮಾಡುತ್ತಿರುವ ಅನ್ಯಾಯ ಯಾವ ಕಾಲದಲ್ಲೂ ಆಗಿರಲಿಲ್ಲ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ನಮ್ಮ ಪ್ರತಿಭಟನಾ ಸಮಾವೇಶಕ್ಕೆ ಅಪಾರ ಪ್ರಮಾಣದಲ್ಲಿ ಜನ ಸೇರಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಹಾಗೂ ಯೋಜನೆ ಘೋಷಣೆ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಅಧಿಕಾರ ಇದ್ದಾಗ ಕೆಲಸ ಮಾಡದವರು ಅಧಿಕಾರ ಹೋಗುವ ಸಮಯದಲ್ಲಿ ಯೋಜನೆ ಘೋಷಣೆ ಮಾಡಿದರೆ ಪ್ರಯೋಜನವೇನು? ಎಂದು ಪ್ರಶ್ನಿಸಿದರು. ಉಳಿದಿರುವ 100 ದಿನಗಳಲ್ಲಿ ಯಾವ ಯೋಜನೆ ಜಾರಿ ಆಗುತ್ತದೆ? ಇದು ಕೇವಲ ಕಾಗದದ ಮೇಲೆ ಉಳಿಯುವ ಯೋಜನೆ ಅಷ್ಟೇ. ಕಳೆದ ಚುನಾವಣೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ 550 ಅನ್ನು ಜಾರಿ ಮಾಡಿಲ್ಲ. ನಮ್ಮ ಪಕ್ಷ ಕೊಟ್ಟಿದ್ದ 169 ಯೋಜನೆಗಳ ಪೈಕಿ 168 ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಡಿಕೆಶಿ ಇದೇ ವೇಳೆ ತಿಳಿಸಿದರು.
ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರದ ನಡೆ ಬಗ್ಗೆ ಕೇಳಿದಾಗ, ‘ಅವರು ನಮ್ಮನ್ನು ಶಾಲಾ ಮಕ್ಕಳೆಂದು ಭಾವಿಸಿದ್ದಾರೆ. ಅವರ ಕ್ರಮದಿಂದ ಯಾರಿಗೆ ಅನುಕೂಲ? ಇರುವ ಮೀಸಲಾತಿ ವರ್ಗ ತೆಗೆದುಹಾಕಲು ಹೇಗೆ ಸಾಧ್ಯ? ಇದು ಅಸಾಧ್ಯ. ಶೇ. 10 ರಷ್ಟು ಮೀಸಲಾತಿ ತೆಗೆದರೆ ಅವರ ಭವಿಷ್ಯ ಏನಾಗಬೇಕು? ಯಾವುದೇ ಕ್ರಮವನ್ನು ಸಂವಿಧಾನ ಬದ್ಧ, ಕಾನೂನು ಬದ್ಧವಾಗಿ ತೆಗೆದುಕೊಳ್ಳಬೇಕು. ಈ ಕ್ರಮದಿಂದ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನ್ಯಾಯ ಸಿಗುತ್ತದೆ ಎಂದು ಬಿಜೆಪಿ ನಾಯಕರನ್ನು ಬಿಟ್ಟು ಆಯಾ ಸಮುದಾಯದ ಮುಖಂಡರಿಂದ ಹೇಳಿಕೆ ಕೊಡಿಸಲಿ. ಸಿಎಂ ಯಾಕೆ ಈ ವಿಚಾರವನ್ನು ಖುದ್ದಾಗಿ ಘೋಷಣೆ ಮಾಡಿಲ್ಲ? 3 ತಿಂಗಳ ನಂತರ ಚುನಾವಣೆ ಬಂದಾಗ ಮೀಸಲಾತಿ ಪ್ರಮಾಣ ಎಷ್ಟು ಎಂದು ತೀರ್ಮಾನ ಮಾಡುತ್ತಾರೆಯೇ? ಇದು ಮೋಸ ಮಾಡುವ ತಂತ್ರ. ಯಾವ ಸಮಾಜಕ್ಕೂ ಅವರು ನ್ಯಾಯ ಒದಗಿಸಿಕೊಟ್ಟಿಲ್ಲ. ನಾವು ಸಮಬಾಳು, ಸಮಪಾಲು ಎಂಬ ನೀತಿ ಮೇಲೆ ಕೇಳುತ್ತಿದ್ದೇವೆ. ಒಕ್ಕಲಿಗರು ಶೇ.12 ರಷ್ಟು ಮೀಸಲಾತಿ ಕೇಳಿದ್ದು ಅದನ್ನು ಘೋಷಣೆ ಮಾಡಲಿ. ಪಂಚಮಸಾಲಿ ಸಮಾಜ ಆಗ್ರಹಿಸಿರುವ ಬೇಡಿಕೆ ಘೋಷಿಸಲಿ. ಪರಿಶಿಷ್ಟರಿಗೆ ನೀಡಲಾಗಿರುವ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಬೇಕಿತ್ತು. ಇದುವರೆಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಹೋಗಿಲ್ಲ. ಇಲ್ಲಿ ಕೇವಲ ಆದೇಶ ಮಾಡಿದರೆ ಆಗುತ್ತದೆಯೇ? ಎಲ್ಲದಕ್ಕೂ ಕಾನೂನು ತೊಡಕು ಇದೆ. ಯಾರ ವಿರೋಧವನ್ನೂ ಕಟ್ಟಿಕೊಳ್ಳಬಾರದು ಎಂದು ಆಡುತ್ತಿರುವ ನಾಟಕ. ಈ ಬಗ್ಗೆ ಎಲ್ಲಾ ನಾಯಕರ ಜತೆ ಚರ್ಚೆ ಮಾಡಿ ನಾಳೆ ಅಥವಾ ನಾಡಿದ್ದು ತಿಳಿಸುತ್ತೇವೆ ‘ ಎಂದು ಹೇಳಿದರು.