Districts

ಇಂದು ನಡೆಯಬೇಕಿದ್ದ ಜಾತ್ರೆ ರದ್ದು: ಬಿಕೋ ಎನ್ನುತ್ತಿರುವ ಘಾಟಿ ಕ್ಷೇತ್ರ

ಘಾಟಿ: ಪ್ರತಿವರ್ಷ ಪುಷ್ಯ ಶುದ್ದ ಷಷ್ಟಿಯಂದು ಅದ್ದೂರಿಯಾಗಿ ನಡೆಯುತ್ತಿದ್ದ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ರಥೋತ್ಸವ ರದ್ದಾದ ಹಿನ್ನೆಲೆ ಘಾಟಿ ಕ್ಷೇತ್ರ ಬಿಕೋ ಎನ್ನುತ್ತಿದೆ. ಭಕ್ತರಿಂದ ತುಂಬಿ ತುಳುಕುತ್ತಿದ್ದ ಸುಬ್ರಹ್ಮಣ್ಯನ ದೇಗುಲ ಕಳೆ ಕಳೆದುಕೊಂಡಿದೆ.  ಕೊರೊನಾ ಮೂರನೇ ಅಲೆ ಹಾಗೂ ಓಮಿಕ್ರಾನ್‌ ಹೆಚ್ಚಾಗುತ್ತಿರುವ ಹಿನ್ನೆಲೆ, ಸರ್ಕಾರ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸೂಚನೆ ಮೇರೆಗೆ ಇಂದು ನಡೆಯಬೇಕಿದ್ದ ರಥೋತ್ಸವವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್‌ ಆದೇಶದಂತೆ ರದ್ದು ಮಾಡಲಾಗಿದೆ.

ಘಾಟಿ ಸುಬ್ರಹ್ಮಣ್ಯ ಜಾತ್ರೆ ಅಂದ್ರೆ ಸಾವಿರಾರು ಜನ ಸೇರುವ ಪವಿತ್ರ ಸ್ಥಳ. ಲಕ್ಷಾಂತರ ಮಂದಿ ಭಕ್ತರು ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗಲು ಆಗಮಿಸುತ್ತಾರೆ. ಪಾರಂಪರಿಕವಾಗಿ ರಥೋತ್ಸವಕ್ಕೆ ೧೫ ದಿನಗಳ ಮುನ್ನ ದನಗಳ ಜಾತ್ರೆ ನಡೆಯುತ್ತದೆ. ಹಲವಾರು ತಳಿಯ ರಾಸುಗಳು ಘಾಟಿ ಬಯಲು ಪ್ರದೇಶದಲ್ಲಿ ಬೀಡು ಬಿಟ್ಟಿರುತ್ತವೆ. ದನಗಳನ್ನು ಕೊಳ್ಳಲು ರೈತರು ತಂಡೋಪತಂಡವಾಗಿ ಆಗಮಿಸುತ್ತಾರೆ. ದನಗಳ ಜಾತ್ರೆ ನಡೆದ ಬಳಿಕ ಪುಷ್ಯ ಶುದ್ದ ಷಷ್ಟಿಯಂದು ರಥೋತ್ಸವ ಘಾಟಿಯ ಬೀದಿ ಬೀದಿಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿ ಮೆರವಣಿಗೆಯಲ್ಲಿ ಬರುತ್ತಿದ್ದ.

ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಆದ್ರೆ ಈ ಬಾರಿ ಲಾಕ್‌ಡೌನ್‌ ಹಿನ್ನೆಲೆ ಅದ್ದೂರಿ ರಥೋತ್ಸವಕ್ಕೆ ಬ್ರೇಕ್‌ ಹಾಕಿದ್ದಾರೆ. ಕೇವಲ ದೇವಾಲಯದ ಪ್ರಾಂಗಣದಲ್ಲೇ ಚಿಕ್ಕ ರಥೋತ್ಸವದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ ಸೋಮವಾರ ಕರ್ಫ್ಯೂ ಇಲ್ಲದಿರುವುದರಿಂದ ಜನ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ಡಿಸಿ ತಿಳಿಸಿದ್ದಾರೆ. ಹಾಗಾಗಿ ಘಾಟಿಯಲ್ಲಿ ಲಸಿಕಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಎರಡನೇ ಲಸಿಕೆ ಹಾಕಿಸಿದ್ರೆ ಮಾತ್ರ ದೇವಾಲಯಕ್ಕೆ ಎಂಟ್ರಿ ಎಂದಿದ್ದಾರೆ ಡಿಸಿ. ಎರಡನೇ ಡೋಸ್‌ ಪಡೆಯದವರಿಗೆ ದೇವಾಲಯದ ಬಳಿ ಲಸಿಕೆ ಪಡೆಯಲು ಅವಕಾಶ ಇದೆ.  ೨ನೇ ಲಸಿಕೆ ಪಡೆದು   ಪ್ರವೇಶಿಸಬಹುದು ಎಂದು ತಿಳಿಸಿದ್ದಾರೆ. ಒಟ್ಟಾರೆ ಇಂದು ಜನಜಂಗುಳಿಯಿಂದ ಕಳೆಗಟ್ಟಿದ ವೈಭವದಲ್ಲಿ ಮೆರೆಯಬೇಕಿದ್ದ ಘಾಟಿ ಕ್ಷೇತ್ರ ಕೊರೊನಾ ಕರಿನೆರಳಿಗೆ ಸಿಲುಕಿ ಬಿಕೋ ಎನ್ನುತ್ತಿದೆ.

Share Post