ನಕಲಿ ವಿಳಾಸ ನೀಡಿ ಮೈಸೂರಿನಲ್ಲಿ ವಾಸ; ಆ ಕೊಠಡಿಯಲ್ಲಿ ಸಿಕ್ಕಿದ್ದೇನು..?
ಮೈಸೂರು; ಮಂಗಳೂರಿನ ಆಟೋದಲ್ಲಿ ಬಾಂಬ್ ಸ್ಫೋಟ ಮಾಡಿದ್ದ ವ್ಯಕ್ತಿಗೂ ಅಲ್ಲಿ ಸಿಕ್ಕ ಆಧಾರ್ ಕಾರ್ಡ್‌ಗೂ ಸಂಬಂಧವಿಲ್ಲ ಅನ್ನೋದು ಖಾತ್ರಿಯಾಗಿದೆ. ಆರೋಪಿ ಮೈಸೂರಿನಲ್ಲಿ ನಕಲಿ ವಿಳಾಸ ನೀಡಿ, ಕೊಠಡಿಯೊಂದನ್ನು ಬಾಡಿಗೆ ಪಡೆದಿದ್ದು ವಾಸವಿದ್ದ ಅನ್ನೋದು ಗೊತ್ತಾಗಿದೆ.
ಆರೋಪಿ ಮೈಸೂರಿನ ಮೇಟಗಳ್ಳಿಯ ಲೋಕನಾಯಕ ನಗರದ ಮೋಹನ್ ಕುಮಾರ್ ಎಂಬುವವರ ಮನೆಯಲ್ಲಿ ವಾಸವಿದ್ದ. ಮನೆಯವರಿಗೆ ಆತ ತಾನು ಪ್ರೇಮರಾಜ್ ಎಂದು ಹೇಳಿಕೊಂಡಿದ್ದ. ನಕಲಿ ಆಧಾರ್ ಕಾರ್ಡ್ ನೀಡಿ ಅಲ್ಲಿ ಬಾಡಿಗೆಗಿದ್ದ ಅನ್ನೋದು ಬಯಲಾಗಿದೆ. ಆರೋಪಿಯ ಭಾವಚಿತ್ರ ತೋರಿಸಿದಾಗ ಮನೆ ಮಾಲೀಕರು ಈತ ನಮ್ಮ ಮನೆಯಲ್ಲಿ ಬಾಡಿಗೆಗಿದ್ದ ಅನ್ನೋದನ್ನು ಖಚಿತ ಮಾಡಿದ್ದಾರೆ.
ಆರೋಪಿ ಕೊಠಡಿಯ ಬಾಡಿಗೆ ಪಡೆಯುವಾಗ ಹುಬ್ಬಳ್ಳಿಯ ಮಾರುತಿ ಎಂಬುವವರ ಮಗ ಪ್ರೇಮರಾಜ್ ಅವರ ವಿಳಾಸ ನೀಡಿದ್ದು, ತಿಂಗಳಿಗೆ 1,800 ಬಾಡಿಗೆ ನೀಡುತ್ತಿದ್ದನಂತೆ. ಆ ಕೊಠಡಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಡೆಬಿಟ್ ಕಾರ್ಡ್, ಬಳಕೆಯಾಗದ ಸಿಮ್ ಮತ್ತು ನೋಟ್ ಬುಕ್, ಸರ್ಕ್ಯೂಟ್ ಡ್ರಾಯಿಂಗ್‌ಗಳು ಸೇರಿದಂತೆ ಹಲವು ವಸ್ತುಗಳ ಪತ್ತೆಯಾಗಿವೆ.
ಸ್ಫೋಟಕ ವಸ್ತುಗಳು, ಸರ್ಕ್ಯೂಟ್ ಬೋರ್ಡ್‌ಗಳು, ಸಲ್ಫ್ಯೂರಿಕ್ ಆ್ಯಸಿಡ್, ಕೆಲವು ರಾಸಾಯನಿಕಗಳು, ಸಣ್ಣ ಬೋಲ್ಟ್‌ಗಳು, ಬ್ಯಾಟರಿಗಳು, ಮೊಬೈಲ್ ಡಿಸ್ಪ್ಲೇಗಳು, ಅಲ್ಯೂಮಿನಿಯಂ ಫಾಯಿಲ್, ಮಿಕ್ಸರ್ ಜಾರ್‌ಗಳು, ಪ್ರೆಶರ್ ಕುಕ್ಕರ್ ಸೀಟಿಗಳು ಕೂಡಾ ಸಿಕ್ಕಿವೆ ಎಂದು ಹೇಳಲಾಗುತ್ತಿದೆ.