Districts

ರಸ್ತೆ-ಮನಸುಗಳನ್ನು ಜೋಡಿಸಿದ ಭಾರತ್‌ ಜೋಡೋ

ಬದನವಾಳು; ಭಾರತ್‌ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್‌ ಗಾಂಧಿ ನಿನ್ನೆ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಿಸಿದರು. ಇದೇ ವೇಳೆ ಗ್ರಾಮದಲ್ಲಿ ಎರಡು ಸಮುದಾಯಗಳ ಮಧ್ಯೆ ಇದ್ದ ವೈಷಮ್ಯವನ್ನು ಕೂಡಾ ನಿವಾರಿಸಲಾಯಿತು.

1993ರಲ್ಲಿ ಗ್ರಾಮದಲ್ಲಿ ಗಲಭೆ ನಡೆದಿತ್ತು. ಇದರಿಂದಾಗಿ ವೀರಶೈವ ಲಿಂಗಾಯತ–ದಲಿತರ ನಡುವೆ ವೈಷಮ್ಯ ಉಂಟಾಗಿತ್ತು. ಅದು ಇಲ್ಲಿಯವರೆಗೂ ಮುಂದುವರೆದಿತ್ತು. ಅದನ್ನು ನಿವಾರಣೆಗೆ ರಾಹುಲ್‌ ಗಾಂಧಿ ಪ್ರಯತ್ನಿಸಿದರು. ಅವರ ಭೇಟಿಯ ನೆನಪಿಗೆ ಕೆಲ ಸೇವಾ ಕಾರ್ಯಗಳೂ ನಡೆದವು. ಕೆಲ ಮನೆಗಳಿಗೆ ಆಯೋಜಕರು ಸುಣ್ಣ–ಬಣ್ಣ ಮಾಡಿಸಿಕೊಟ್ಟಿದ್ದಾರೆ.
ವೀರಶೈವ ಲಿಂಗಾಯತರು, ಹಿಂದುಳಿದವರು, ದಲಿತರೊಂದಿಗೆ ರಾಹುಲ್‌ ಮತ್ತು ನಾಯಕರು ಸಹಭೋಜನ ಮಾಡಿದರು. ‘ವಿವಿಧ ಸಮಾಜದವರು ಸಹಪಂಕ್ತಿಯಲ್ಲಿ ಊಟ ಮಾಡಿದ್ದು 29 ವರ್ಷಗಳ ನಂತರ ಇದೇ ಮೊದಲು’ ಎಂದು ಮುಖಂಡರು ತಿಳಿಸಿದರು.
ಗ್ರಾಮದಲ್ಲಿ ನಡೆದಿದ್ದ ಗಲಭೆಯ ನಂತರ ವೈಷಮ್ಯ ಏರ್ಪಟ್ಟು‌, ಎರಡು ಬೀದಿಗಳ ಸಂಪರ್ಕ ರಸ್ತೆ ಬಳಕೆ ಆಗುತ್ತಿರಲಿಲ್ಲ. ‘ಯಾತ್ರೆ’ ಹಿನ್ನೆಲೆಯಲ್ಲಿ ಎರಡೂ ಬೀದಿಗಳನ್ನು ಜೋಡಿಸಲು ರಸ್ತೆ ನಿರ್ಮಿಸಲಾಗಿದ್ದು, ಅದಕ್ಕೆ ಪೇವರ್ಸ್‌ ಅಳವಡಿಸಲಾಗಿದೆ. ‘ಭಾರತ್ ಜೋಡೊ ರಸ್ತೆ’ ಎಂಬ ಹೆಸರಿಟ್ಟು ಫಲಕ ಅಳವಡಿಸಲಾಗಿದೆ. ಪೇವರ್ಸ್‌ ಜೋಡಿಸುವ ಮೂಲಕ 180 ಮೀಟರ್‌ ಉದ್ದದ ರಸ್ತೆಯನ್ನು ರಾಹುಲ್‌ ಉದ್ಘಾಟಿಸಿ ಸ್ಥಳೀಯರೊಂದಿಗೆ ನಡೆದರು. ದಲಿತರ ಕೇರಿಯಲ್ಲಿದ್ದ ಮಹಾತ್ಮಗಾಂಧಿ ಪ್ರತಿಮೆಗೆ ನಮಿಸಿದರು.

Share Post