ಬಸ್‌ನಲ್ಲಿ ಕೂತಿದ್ದ ಮಹಿಳೆ ಕೈಗೆ ಮಗು ಕೊಟ್ಟ ತಾಯಿ; ಮಗುವಿನೊಂದಿಗೆ ಆಕೆ ಎಸ್ಕೇಪ್!
ಮಂಡ್ಯ; ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಹೀಗಾಗಿ ನಿಂತಿದ್ದ ಮಹಿಳೆ ತನ್ನ ಮಗುವನ್ನು ಸೀಟ್‌ನಲ್ಲಿ ಕೂತಿದ್ದ ಮಹಿಳೆ ಕೈಗೆ ಕೊಟ್ಟಿದ್ದಾಳೆ. ಆದ್ರೆ ಇಳಿಯುವಾಗ ತಾಯಿಯನ್ನು ಯಾಮಾರಿಸಿದ ಅಪರಚಿತ ಮಹಿಳೆ ಮಗುವಿನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಮಂಡ್ಯ ಜಿಲ್ಲೆ ಮಳವಳ್ಳಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಟಿ ನರಸೀಪುರ ತಾಲೂಕಿನ ವಡ್ಡರಕೊಪ್ಪಲು ನಿವಾಸಿ ಸವಿತಾ ಎಂಬುವವರೇ ಮಗು ಕಳೆದುಕೊಂಡವರು. ಇವರು ಮಳವಳ್ಳಿಗೆ ಹೋಗಬೇಕಿತ್ತು. ಹೀಗಾಗಿ ಅವರು ಏಳು ತಿಂಗಳ ಮಗುವಿನೊಂದಿಗೆ ಚನ್ನಪಟ್ಟಣ ಬಸ್ ನಿಲ್ದಾಣದಿಂದ ಬಸ್ ಹತ್ತಿದ್ದಾರೆ. ಆದ್ರೆ ಬಸ್ ತುಂಬಾ ರಶ್ ಇದ್ದಿದ್ದರಿಂದ ಕೂತಿದ್ದ ಅಪರಿಚತ ಮಹಿಳೆ ಕೈಗೆ ಮಗು ಕೊಟ್ಟಿದ್ದಾರೆ.
ಆ ಮಹಿಳೆ ಕೂಡಾ ತಾನು ಮಳವಳ್ಳಿ ಬಸ್ ನಿಲ್ದಾಣದಲ್ಲೇ ಇಳಿಯೋದಾಗಿ ಹೇಳಿದ್ದಾಳೆ. ಲಗೇಜ್ ಸಮೇತ ಇದ್ದ ಸವಿತಾ ಕೆಳಗೆ ಇಳಿದ ಮೇಲೆ ಮಹಿಳೆಯಿಂದ ಮಗು ಪಡೆಯಲು ಕಾದಿದ್ದಾಳೆ. ಆದ್ರೆ ಮಗುವಿನೊಂದಿಗೆ ಇಳಿದ ಮಹಿಳೆ, ಸವಿತಾ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾಳೆ. ಈ ಬಗ್ಗೆ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.