ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆ ಮನೆಯಲ್ಲಿ ಲಕ್ಷಾಂತರ ರೂಪಾಯಿ ಕಳವು!
ಬೆಂಗಳೂರು; ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಅತ್ತೆ ಮನೆಯಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನವಾಗಿದೆ. ಚಂದ್ರಾಲೇಔಟ್ನಲ್ಲಿರುವ ಗುರುಕಿರಣ್ ಅವರ ಅತ್ತೆ ಕಸ್ತೂರಿ ಶೆಟ್ಟಿ ಅವರ ಮನೆಯಲ್ಲಿ ಈ ಕಳ್ಳತನವಾಗಿದೆ. ಈ ಬಗ್ಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಸ್ತೂರಿ ಶೆಟ್ಟಿಯವರು ಡಿಸೆಂಬರ್ 31ರಂದು ಮಧ್ಯಾಹ್ನ ಬೀರುವಿನಲ್ಲಿ 2.05 ಲಕ್ಷ ರೂಪಾಯಿ ಇಟ್ಟಿದ್ದರಂತೆ. ಆದ್ರೆ ಜನವರಿ 5ರಂದು ಬೀರುವನ್ನು ತೆಗೆದು ನೋಡಿದಾಗ ಹಣ ನಾಪತ್ತೆಯಾಗಿದೆ. ಎರಡು ದಿನಗಳ ಕಾಲ ಮನೆ ಎಲ್ಲಾ ಹುಡುಕಾಡಿದರೂ ಹಣ ಸಿಕ್ಕಿಲ್ಲ. ಹೀಗಾಗಿ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಲಾಗಿದೆ. ನಮ್ಮ ಮನೆಗೆ ಆರು ತಿಂಗಳಿಂದ ರತ್ನಮ್ಮ ಎಂಬುವವರು ಮನೆ ಕೆಲಸಕ್ಕೆ ಬರುತ್ತಾರೆ. ಅವರು ಸ್ವಚ್ಛ ಮಾಡೋದಕ್ಕೆ ನನ್ನ ರೂಮ್ಗೆ ಬರುತ್ತಾರೆ. ಅದು ಬಿಟ್ಟರೆ ಬೇರೆ ಯಾರೂ ನನ್ನ ರೂಮ್ಗೆ ಕಾಲಿಡುವುದಿಲ್ಲ. ಹೀಗಾಗಿ ರತ್ನಮ್ಮ ಅವರೇ ಹಣ ಕದ್ದಿರಬಹುದು ಅನ್ನೋ ಅನುಮಾನವಿದೆ ಎಂದು ಕಸ್ತೂರಿ ಶೆಟ್ಟಿ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಹೀಗಾಗಿ ಪೊಲೀಸರು ಮನೆಕೆಲಸದಾಕೆ ರತ್ನಮ್ಮಳನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.