ಭಜರಂಗದಳ ನಿಷೇಧ ಮಾಡ್ತೀವಿ ಅಂತ ನಾನು ಹೇಳಿಲ್ಲ; ಸಿದ್ದರಾಮಯ್ಯ
ನಾಗಮಂಗಲ; ನಾವು ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡ್ತೀವಿ ಎಂದು ಹೇಳಿಯೇ ಇಲ್ಲ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಅವರು, ಮಾಧ್ಯಮಗಳ ಪ್ರಶ್ನೆಗೆ ಉತ್ತರ ಕೊಟ್ಟರು.
ನಾವು ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದೇನೆ. ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಯಾವುದೇ ಸಂಘಟನೆಯಾದರೂ ನಿಷೇಧ ಮಾಡುತ್ತೇವೆ ಎಂದು ಹೇಳಿದ್ದೇನೆ. ಬಜರಂಗದಳ ಮಾತ್ರ ನಿಷೇಧ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಅದು ಯಾವುದೇ ಸಂಘಟನೆಯಾಗಿರಬಹುದು. ಕಾನೂನಿಗೆ ವಿರುದ್ಧವಾಗಿ ನಡೆಯಬಾರದು. ಕಾನೂನು ಕೈಗೆತ್ತಿಕೊಳ್ಳಬಾರದು. ಅಂತಹ ಕೆಲಸ ಮಾಡುವ ಸಂಘಟನೆಯನ್ನು ನಿಷೇಧ ಮಾಡ್ತೀವಿ ಎಂದು ಹೇಳಿದ್ದೇನೆ. ಆದ್ರೆ ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಅದನ್ನೇ ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ. ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.