ನಾಲ್ಕು ಕೋಟಿ ನಕಲಿ ಖಾತೆ ಸೃಷ್ಟಿಸಿದ್ದ ಕಾಂಗ್ರೆಸ್ಸಿಗರು; ಮೋದಿ ಗಂಭೀರ ಆರೋಪ
ಅಂಕೋಲಾ; ಕಾಂಗ್ರೆಸ್‌ನವರು ನಾಲ್ಕು ಕೋಟಿ ನಕಲಿ ಖಾತೆ ಸೃಷ್ಟಿ ಮಾಡಿ ದುಡ್ಡು ಹೊಡೆಯುತ್ತಿದ್ದರು. ಅದನ್ನು ನಿಲ್ಲಿಸಿದ್ದಕ್ಕೆ ಅವರಿಗೆ ನಮ್ಮ ಮೇಲೆ ಕೋಪ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಚುನಾವಣಾ ಪ್ರಚಾರ ಮಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಂದು ಲಕ್ಷ ನಕಲಿ ಖಾತೆ ಸೃಷ್ಟಿ ಮಾಡಿ, ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯುತ್ತಿದ್ದರು. 30 ಲಕ್ಷ ನಕಲಿ ಖಾತೆಗೆ ಶಿಕ್ಷಣ ಸಬ್ಸಿಡಿ ಹೋಗುತ್ತಿತ್ತು. ಒಂದು ಕೋಟಿ ನಕಲಿ ಖಾತೆಗಳಿಗೆ ವಿಧವಾ ವೇತನ ಹೋಗುತ್ತಿತ್ತು. ನಾವು ಬಂದ ಮೇಲೆ ಇದಕ್ಕೆಲ್ಲಾ ಕಡಿವಾಣ ಹಾಕಿದೆವು. ಸೂಕ್ತ ಫಲಾನುಭವಿಗಳಿಗೆ ಅವರ ಖಾತೆಗಳಿಗೆ ನೇರವಾಗಿ ಸಬ್ಸಿಡಿ ಹೋಗುವಂತೆ ಮಾಡಿದೆವು ಎಂದು ಮೋದಿ ಹೇಳಿದರು.
ವಂಶ ರಾಜಕಾರಣ ಮಾಡುವ ಕಾಂಗ್ರೆಸ್ ಭ್ರಷ್ಟಾಚಾರವೇ ನಮ್ಮ ಮೊದಲ ಧ್ಯೇಯ ಮಾಡಿಕೊಂಡಿದೆ. ಆದ್ರೆ ದೇಶ ಮೊದಲು ಅನ್ನೋದು ನಮ್ಮ ಧ್ಯೇಯ ಎಂದು ಮೋದಿ ಇದೇ ವೇಳೆ ಹೇಳಿದರು. ನಾವು ಕರ್ನಾಟಕ ರಾಜ್ಯವನ್ನು ನಂಬರ್ ವನ್ ಮಾಡಲು ಹೊರಟಿದ್ದೇವೆ. ನಿಮ್ಮ ಒಂದೊಂದು ಮತಕ್ಕೂ ರಾಜ್ಯವನ್ನು ನಂಬರ್ ವನ್ ಮಾಡುವ ಶಕ್ತಿ ಇದೆ ಎಂದು ಮೋದಿ ಹೇಳಿದರು.