ಪತ್ನಿಯ ಶೀಲದ ಬಗ್ಗೆ ಶಂಕೆ; ಕೊಲೆ ಮಾಡಿ ಪೊಲೀಸರಿಗೆ ಶರಣು..!
ರಾಯಚೂರು; ಪತ್ನಿ ಅನೈತಿಕ ಸಂಬಂಧಿ ಹೊಂದಿದ್ದಾಳೆಂದು ಶಂಕಿಸಿ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದೆ. 28 ವರ್ಷದ ರೇಣುಕಾ ಕೊಲೆಯಾದ ಮಹಿಳೆಯಾಗಿದ್ದಾರೆ.
ಆರೋಪಿ ಜಟ್ಟೆಪ್ಪ ಪತ್ನಿಯನ್ನು ಕೊಲೆ ಮಾಡಿದ ಮೇಲೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೊಲೆಯಾದ ರೇಣುಕಾ ಅದೇ ಗ್ರಾಮದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಅಂತ ಆರೋಪಿ ಶಂಕಿಸಿದ್ದಾನೆ.
ಇದೇ ವಿಚಾರಕ್ಕೆ ಆಗಾಗ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಇಂದು ಬೆಳಗ್ಗೆ ಸಹ ಇದೇ ವಿಚಾರಕ್ಕೆ ಗಲಾಟೆಯಾಗಿದೆ. ಗಲಾಟೆ ವೇಳೆ ಮನೆಯಲ್ಲಿದ್ದ ಕೊಡಲಿಯಿಂದ ರೇಣುಕಾಳನ್ನು ಆರೋಪಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ.