HIJAB ROW; ಇಂದೂ ಪರೀಕ್ಷೆ ಬಹಿಷ್ಕರಿಸಿದ ಇಬ್ಬರು ವಿದ್ಯಾರ್ಥಿನಿಯರು
ಶಿವಮೊಗ್ಗ(SHIMOGA); ಶಿವಮೊಗ್ಗದಲ್ಲಿ ಇವತ್ತೂ ಕೂಡಾ ಹಿಜಾಬ್ ವಿವಾದ (HIJAB ROW) ಮುಂದುವರೆದಿದೆ. ಹಿಜಾಬ್ಗೆ ಅವಕಾಶ ನೀಡದಿದ್ದರೆ ಪರೀಕ್ಷೆಯೇ ಬರೆಯುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಕೆಲ ವಿದ್ಯಾರ್ಥಿನಿಯರು. ಇಂದು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (KARNATAKA PUBLIC SCHOOL) ಹತ್ತನೇ ತರಗತಿಯ ಪೂರ್ವಭಾವಿ ಪರೀಕ್ಷೆ ಇತ್ತು. ಆದ್ರೆ, ಬುರ್ಖಾ ಧರಿಸಿ ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು, ಅದನ್ನು ತೆಗೆದು ಪರೀಕ್ಷೆ ಬರೆಯಲು ನಿರಾಕರಿಸಿದರು. ಬುರ್ಖಾ ತೆಗೆಯಲೇಬೇಕು ಎಂದು ಸೂಚಿಸಿದಾಗ ಇಬ್ಬರೂ, ಪರೀಕ್ಷೆ ಬಹಿಷ್ಕರಿಸಿ ಮನೆ ಕಡೆ ನಡೆದಿದ್ದಾರೆ.
ನಿನ್ನೆ ಕೂಡಾ ಇಲ್ಲಿ ಬಿಎಚ್ ರಸ್ತೆಯಲ್ಲಿರುವ (SHIMOGA BH ROAD) ಇದೇ ಶಾಲೆಯಲ್ಲಿ ಇಂತಹದ್ದೇ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದರು. ಆದ್ರೆ ಶಿಕ್ಷಕರು ಕೋರ್ಟ್ ಆದೇಶದ ಬಗ್ಗೆ ಮನವಿಕೆ ಮಾಡಿಕೊಟ್ಟರು. ಅನಂತರ ಹಿಜಾಬ್ ತೆಗೆದು ಪರೀಕ್ಷೆ ಬರೆದರು. ನಿನ್ನೆ ಕೂಡಾ ಕೆಲ ವಿದ್ಯಾರ್ಥಿನಿಯರು ಶಿಕ್ಷಕರ ಮನವೊಲಿಕೆಗೆ ಮಣಿಯದೇ ಪರೀಕ್ಷೆ ಬಹಿಷ್ಕರಿಸಿದ್ದರು.