Districts

ವೈದ್ಯರ ಕೊರತೆ ನೀಗಿಸಲು ಹೊಸ ಕಾಲೇಜುಗಳ ನಿರ್ಮಾಣ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಮಂಗಳೂರು: ಭಾರತದಲ್ಲಿ 10 ಸಾವಿರ ಜನಸಂಖ್ಯೆಗೆ 0.59 ಫಿಸಿಯೋಥೆರಪಿ ತಜ್ಞರಿದ್ದಾರೆ. ಇದಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಹೊಸ ಕಾಲೇಜುಗಳನ್ನು ಆರಂಭಿಸುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಅಂತಾರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ ‘ಮಂಗಳೂರು ಫಿಸಿಯೋಕಾನ್-2022’ ನಲ್ಲಿ ಮಾತನಾಡಿದ ಸಚಿವರು, ಅಮೆರಿಕದಲ್ಲಿ 10 ಸಾವಿರ ಜನಸಂಖ್ಯೆಗೆ 7 ಫಿಸಿಯೋಥೆರಪಿ ತಜ್ಞರಿದ್ದಾರೆ. ಆದರೆ ಭಾರತದಲ್ಲಿ 10 ಸಾವಿರ ಜನಸಂಖ್ಯೆಗೆ 0.59 ತಜ್ಞರಿದ್ದಾರೆ. ಈ ರೀತಿ ವೈದ್ಯರು, ತಜ್ಞರ ಕೊರತೆ ನಿವಾರಿಸಲೆಂದೇ ಪ್ರಧಾನಿ ನರೇಂದ್ರ ಮೋದಿಯವರು ವೈದ್ಯಕೀಯ ಶಿಕ್ಷಣಕ್ಕೆ ಆದ್ಯತೆ ನೀಡಿ ಹೆಚ್ಚು ಕಾಲೇಜುಗಳನ್ನು ಆರಂಭಿಸಿದ್ದಾರೆ. ಇದರಿಂದಾಗಿ ಹೆಚ್ಚು ವೈದ್ಯರು, ತಜ್ಞರು ಹೊರಬಂದು ಕೊರತೆ ನೀಗಿಸಲು ಸಾಧ್ಯವಾಗುತ್ತದೆ ಎಂದರು.

ಔಷಧಿಗಳು ರೋಗವನ್ನು ಗುಣಪಡಿಸುತ್ತವೆ. ಆದರೆ ಫಿಸಿಯೋಥೆರಪಿಯು ಜೀವನ ನೀಡುತ್ತದೆ. ನರ ಸಂಬಂಧಿ ಸಮಸ್ಯೆ, ಅಂಗವೈಕಲ್ಯ ಮೊದಲಾದವುಗಳಿಗೆ ಫಿಸಿಯೋಥೆರಪಿ ಪರಿಹಾರ ನೀಡುತ್ತದೆ. ಆಧುನಿಕ ಕಾಲದಲ್ಲಿ ಜ್ಞಾನವೇ ಮುಖ್ಯವಾದ ಶಕ್ತಿ. ಅದೇ ರೀತಿಯಲ್ಲಿ ಫಿಸಿಯೋಥೆರಪಿ ಕ್ಷೇತ್ರದಲ್ಲಿ ಜ್ಞಾನದ ಜೊತೆಗೆ ಕೌಶಲ್ಯವೂ ಮುಖ್ಯವಾದ ಶಕ್ತಿ. ಇಂತಹ ಕೌಶಲ್ಯವನ್ನು ತಜ್ಞರು ಅಭಿವೃದ್ಧಿ ಮಾಡಿಕೊಳ್ಳಬೇಕು. ತಂತ್ರಜ್ಞಾನ ಹಾಗೂ ಸಂಶೋಧನೆಗಳು ಇಲ್ಲಿ ಮುಖ್ಯವಾಗುತ್ತದೆ. ಫಿಸಿಯೋಥೆರಪಿ ಬಹಳ ಪುರಾತನವಾದ ಜ್ಞಾನವಾಗಿದೆ. ಭಾರತದ ಆಯುರ್ವೇದದಲ್ಲೂ ಇದಕ್ಕೆ ಸಂಬಂಧಿಸಿದ ಅಂಶಗಳಿವೆ ಎಂದರು.

Share Post