ಸಿದ್ದರಾಮಯ್ಯ ಯಾವೂರ ದಾಸಯ್ಯ; ಹೆಚ್.ಡಿ.ಕುಮಾರಸ್ವಾಮಿ ಸಿಡಿಮಿಡಿ
ಹಾಸನ: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿಮ್ಮ ತಂದೆ ಎಚ್.ಡಿ.ದೇವೇಗೌಡರ ಮೇಲೆ ಆಣೆ ಮಾಡಲು ಸಿದ್ಧರಿದ್ದೀರಾ? ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದ ಸಿದ್ದರಾಮಯ್ಯ ಮಾತಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಸುಳ್ಳಿನ ರಾಮಯ್ಯ ಮೊದಲು ನಾನು ಕೇಳಿದ 4 ಪ್ರಶ್ನೆಗಳಿಗೆ ಉತ್ತರಿಸಲಿ. ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಸ್ವಲ್ಪ ಉಸಿರಾಡುತ್ತಿದೆ. ಇವರು ಯಾವ ಕೋಮುವಾದ ನಿಲ್ಲಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇವರ ಪಕ್ಷದವರೇ ಹೋಗಿ ಡಿ.ಜೆ.ಹಳ್ಳಿಯಲ್ಲಿ ಬೆಂಕಿ ಹಚ್ಚಿದ್ದರು. ಈಗ ಹುಬ್ಬಳ್ಳಿಯಲ್ಲೂ ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಇಂತಹವರು ದೇಶದಲ್ಲಿ ಜಾತ್ಯತೀತ ವಾದವನ್ನು ಉಳಿಸುತ್ತಾರಾ? ಇನ್ನು ಇವರು ದೇವೇಗೌಡರ ಮೇಲೆ ಆಣೆ ಮಾಡಿ ಎಂದು ಹೇಳುತ್ತಾರೆ. ಇದನ್ನು ಹೇಳಲು ಸಿದ್ದರಾಮಯ್ಯ ನೀನು ಯಾವೂರ ದಾಸಯ್ಯ? ಎಂದು ಹೆಚ್ಡಿಕೆ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ಎಚ್ಚರಿಕೆಯಿಂದ ಮಾತನಾಡಬೇಕು. ಪದೇ ಪದೆ ಜೆಡಿಎಸ್ ಅನ್ನು ಬಿಜೆಪಿ ಬಿ ಟೀಂ ಎನ್ನುತ್ತೀರಿ. ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರ ಬಂದಿದ್ದು ಯಾರಿಂದ? ಸಂಪುಟ ವಿಸ್ತರಣೆಯ ವೇಳೆ ಟವಲ್ ಕೊಡವಿ ಎದ್ದಿದ್ದರು. ಇಬ್ಬರು ಪಕ್ಷೇತರರನ್ನು ಮೈತ್ರಿ ಮಾಡಿಸಿ ಸರ್ಕಾರ ಕಿತ್ತರು. ಸಮ್ಮಿಶ್ರ ಸರ್ಕಾರ ಬೀಳುವುದಕ್ಕೆ ಇವರೇ ಮೂಲ ಕಾರಣ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.