ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಹರ್ಷನ ಅಸ್ತಿ ವಿಸರ್ಜನೆ: ಕಾಳಿಮಠದ ಸ್ವಾಮೀಜಿ
ಚಿಕ್ಕಮಗಳೂರು: ಹತ್ಯೆಯಾಗಿರುವ ಬಜರಂಗದಳದ ಕಾರ್ಯಕರ್ತ ಹರ್ಷನ ಅಸ್ಥಿಯನ್ನು ಶ್ರೀರಂಗಪಟ್ಟಣಕ್ಕೆ ಧರ್ಮರಥದಲ್ಲಿ ಕೊಂಡೊಯ್ದು ವಿಸರ್ಜಿಸಲಾಗುವುದು ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ತಿಳಿಸಿದರು.
ಕುಟುಂಬಸ್ಥರೊಂದಿಗೆ ಚರ್ಚಿಸಿ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಲು ತೀರ್ಮಾನಿಸಲಾಗಿದೆ. ಫೆ. 24ರಂದು ಬೆಳಗ್ಗೆ 6 ಗಂಟೆಗೆ ಶಿವಮೊಗ್ಗದಿಂದ ಧರ್ಮರಥ ಹೊರಡಲಿದ್ದು, ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಬಾಣಾವರ, ಅರಸೀಕೆರೆ, ಚನ್ನರಾಯಪಟ್ಟಣ, ಕೆ.ಆರ್.ಪೇಟೆ ಮೂಲಕ ಸಂಜೆ 4 ಗಂಟೆಗೆ ಶ್ರೀರಂಗಪಟ್ಟಣ ತಲುಪಲಿದೆ. ಅಪಮೃತ್ಯು ಆಗಿರುವುದರಿಂದ ಭಾನುಪ್ರಕಾಶ ಶರ್ಮ ಅವರ ನೇತೃತ್ವದಲ್ಲಿ ಬಲಿ ಮೂಲಕ ಅಸ್ತಿ ವಿಸರ್ಜಿಸಲಾಗುವುದು. ಶಿವಮೊಗ್ಗದಲ್ಲಿ ಪರಿಸ್ಥಿತಿ ಹದಗೆಟ್ಟಿರುವುದರಿಂದ ಬಹಳಷ್ಟು ಹಿಂದು ಕಾರ್ಯಕರ್ತರಿಗೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಧರ್ಮರಥದಲ್ಲಿ ಅಸ್ತಿಯನ್ನು ಕೊಂಡೊಯ್ಯುವಾಗ ಅದಕ್ಕೆ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಹತ್ಯೆ ಮಾಡಿರುವವರನ್ನು ಶೀಘ್ರವೇ ಬಂಧಿಸಿ, ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿರುವ ಅವರು, ಧರ್ಮರಥ ಸಾಗುವ ಮಾರ್ಗದ ಗ್ರಾಮಗಳಲ್ಲಿ ಅಸ್ತಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಕಾನೂನು ಚೌಕಟ್ಟಿನಲ್ಲಿ ರಕ್ಷಣೆ ನೀಡಬೇಕು. 5ನೇ ದಿನಕ್ಕೆ ಅಸ್ತಿ ವಿಸರ್ಜಿಸಬೇಕಾಗಿದ್ದು ಕುಟುಂಬಸ್ಥರಿಂದ ಎಲ್ಲಾ ಸಿದ್ಧತೆಗಳು ನಡೆದಿವೆ. ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸುವ ಸಂಕಲ್ಪ ಮಾಡಲಾಗಿದೆ. ರಕ್ಷಣೆ ನೀಡಬೇಕೆಂದು ವಿವಿಧ ಹಿಂದೂಪರ ಸಂಘಟನೆಗಳು ಪೊಲೀಸ್ ಇಲಾಖೆ ಹಿರಿಯ ಅಧೀಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕೊಲೆ ಪ್ರಕರಣ ಉನ್ನತಮಟ್ಟದ ತನಿಖೆಯಾಗಬೇಕು. ಮುಂದಿನ ದಿನಗಳಲ್ಲಿ ಯಾರೂ ಇಂತಹ ಕೃತ್ಯ ಎಸಗದಂತೆ ತಕ್ಕ ಪಾಠ ಕಲಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.