ಹಳ್ಳಿಕಾರ್ ಒಂಟಿ ಎತ್ತು ʻಜಾಗ್ವಾರ್ʼ ಬರೋಬ್ಬರಿ 9.20 ಲಕ್ಷ ರೂ.ಗೆ ಮಾರಾಟ
ಮಂಡ್ಯ; ಮೈಸೂರು ಭಾಗದಲ್ಲಿ ಹಳ್ಳಿಕಾರ್ ತಳಿ ಗೋವುಗಳನ್ನು ಹೆಚ್ಚಿಗೆ ಸಾಕುತ್ತಾರೆ. ಇದರ ಹಾಲಿಗೆ ವಿಶೇಷವಾದ ಮಹತ್ವವಿದೆ. ಈ ಹಾಲು ಶ್ರೇಷ್ಠ ಅಂತಾರೆ. ಇನ್ನು ಹಳ್ಳಿಕಾರ್ ಎತ್ತುಗಳು ಕೂಡಾ ಹೊಲದಲ್ಲಿ ಚೆನ್ನಾಗಿ ದುಡಮೆ ಮಾಡುತ್ತವೆ. ಅಷ್ಟೇ ಅಲ್ಲ, ರೇಸ್‌ಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತವೆ. ಹೀಗಾಗಿ ತಮಿಳುನಾಡಿನಲ್ಲಿ ಹಲವು ರೇಸ್‌ಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಒಂಟಿ ಹಳ್ಳಿಕಾರ್ ಎತ್ತೊಂದು ದಾಖಲೆ ಬೆಲೆಗೆ ಮಾರಾಟವಾಗಿದೆ.
ಶ್ರೀರಂಗಪಟ್ಟಣ ತಾಲ್ಲೂಕು ಶ್ರೀನಿವಾಸ ಅಗ್ರಹಾರ ಗ್ರಾಮದ ರೈತ ನವೀನ್ ಸಾಕಿದ್ದ ಹಳ್ಳಿಕಾರ್ ತಳಿಯ ಒಂಟಿ ಎತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿತ್ತು. ತಮಿಳುನಾಡಿನ ಹಲವು ರೇಸ್‌ಗಳಲ್ಲಿ ಅದು ಪಾಲ್ಗೊಂಡಿತ್ತು. ಈ ವೇಳೆ ತಮಿಳುನಾಡಿನ ಸರವಣಪಟ್ಟಿ ಗ್ರಾಮದ ಸಿರವೈ ಎಂಬುವವರು ಈ ಎತ್ತನ್ನು ನೋಡಿದ್ದರು. ರೇಸ್ ಎತ್ತುಗಳನ್ನು ಸಾಕುವ ಹವ್ಯಾಸ ಇರುವ ಸಿರವೈ ಹೇಗಾದರೂ ಮಾಡಿ ಈ ಎತ್ತನ್ನು ಖರೀದಿ ಮಾಬೇಕೆಂದು ಬಯಸಿದ್ದರು. ಗೊತ್ತಿರುವವರ ಮೂಲಕ ನವೀನ್ ಅವರನ್ನು ಸಂಪರ್ಕ ಮಾಡಿದ್ದರು. ಆದ್ರೆ ನವೀನ್ ಮೊದಲಿಗೆ ಎತ್ತು ಕೊಡೋದಿಲ್ಲ ಎಂದು ಹೇಳಿದ್ದರು. ಆದ್ರೆ ಸಿರವೈ ಒಂದೇ ಸಲ 9 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಕೇಳಿದ್ದರು. ಆಗ ನವೀನ್ ಎತ್ತನ್ನು ಮಾರಾಟ ಮಾಡೋದಕ್ಕೆ ಮುಂದಾಗಿದ್ದಾರೆ. ಕೊನೆಗೆ ವ್ಯಾಪಾರ ಕುದುರಿ 9 ಲಕ್ಷದ 20 ಸಾವಿರಕ್ಕೆ ಮಾರಾಟ ಮಾಡಲಾಗಿದೆ.
ನಿನ್ನೆ ಸಿರವೈ ಅವರು ಅಷ್ಟೋ ಹಣವನ್ನು ಕೊಟ್ಟು ಎತ್ತನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿದ್ದಾರೆ. ಅಂದಹಾಗೆ ನವೀನ್ ಅವರು ಮಂಡ್ಯದ ಇಂಡವಾಳುವಿನ ಅಜಿತ್ ಎಂಬುವವರಿಂದ 1.20 ಲಕ್ಷ ರೂಪಾಯಿಗೆ ಈ ಎತ್ತನ್ನು ಖರೀದಿ ಮಾಡಿ ತಂದಿದ್ದರು. ಅದಕ್ಕೆ ಜಾಗ್ವಾರ್ ಎಂದು ಹೆಸರಿಟ್ಟು ರೇಸ್‌ಗಳಿಗೆ ಸಜ್ಜು ಮಾಡಿದ್ದರು. ಇದೀಗ ಈ ಎತ್ತಿಗೆ ಎಂಟು ಲಕ್ಷ ರೂಪಾಯಿ ಲಾಭವಾಗಿದೆ. ಇದರಿಂದ ಖುಷಿಯಾದ ರೈತ ನವೀನ್ ಸ್ನೇಹಿತರಿಗೆಲ್ಲಾ ಪಾರ್ಟಿ ಕೊಡಿಸಿದ್ದಾರೆ. ಊರಿನಲ್ಲಿ ಎತ್ತಿಗೆ ಅದ್ದೂರಿ ಮೆರವಣಿಗೆ ನಡೆಸಿ, ತಮಿಳುನಾಡುಗೆ ಕಳುಹಿಸಿಕೊಟ್ಟಿದ್ದಾರೆ.