ಜೋಗಕ್ಕೆ ತಾವರ್ ಚಂದ್ ಭೇಟಿ ; ಕನ್ನಡ ಕಲೀತಾರಂತೆ ರಾಜ್ಯಪಾಲರು
ಶಿವಮೊಗ್ಗ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜೋಗ ಜಲಪಾತಕ್ಕೆ ಭೇಟಿ ನೀಡಿ, ಅದರ ವೈಭವವನ್ನು ಕಣ್ತುಂಬಿಕೊಂಡರು. ರಾಜ್ಯಪಾಲರು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಹಲವು ಪ್ರವಾಸಿ ತಾಣಗಳಿವೆ ಭೇಟಿ ನೀಡಿದ್ದಾರೆ. ಅದರ ಭಾಗವಾಗಿ ವಿಶ್ವವಿಖ್ಯಾತ ಜೋಗ ಜಲಪಾತಕ್ಕೂ ಭೇಟಿ ನೀಡಿ, ಧುಮ್ಮಿಕ್ಕುವ ನೀರನ್ನು ನೋಡಿ ಖುಷಿ ಪಟ್ಟರು.
ಗುರುವಾರ ಬೆಳಗ್ಗೆ ಜೋಗ ಜಲಪಾತಕ್ಕೆ ಭೇಟಿ ನೀಡಿದ್ದ ರಾಜ್ಯಪಾಲರು, ಜಲಪಾತದ ಮುಂದೆ ನಿಂತು ಫೋಟೋ ತೆಗೆಸಿಕೊಂಡರು. ಹಾಜರಿದ್ದ ಅಧಿಕಾರಿಗಳು ಜೊತೆಗೂ ಫೋಟೋ ಸೆಷನ್ ನಡೆಸಿದರು. ಅನಂತರ ಅಧಿಕಾರಿಗಳಿಂದ ಜೋಗ ಜಲಪಾತ ಸೇರಿದಂತೆ ಶಿವಮೊಗ್ಗದ ಪ್ರವಾಸಿ ತಾಣಗಳು ಕುರಿತು ಮಾಹಿತಿ ಪಡೆದುಕೊಂಡರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಮಧ್ಯಾಹ್ನವೇ ಶಿವಮೊಗ್ಗಕ್ಕೆ ಆಮಿಸಿದ್ದರು. ರಾತ್ರಿ ಜೋಗದ ಬಾಂಬೆ ಗೆಸ್ಟ್ ಹೌಸ್‌ನಲ್ಲಿ ತಂಗಿದ್ದರು. ಸಾಗರ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಪ್ರಮುಖರು ರಾಜ್ಯಪಾಲರಿಗೆ ಸ್ವಾಗತ ಕೋರಿದರು. ಇನ್ನು ಇದಕ್ಕೂ ಮೊದಲು ರಾಜ್ಯಪಾಲರು ಶಿವಮೊಗ್ಗದಲ್ಲಿ ಪ್ರೇರಣಾ ಎಜುಕೇಷನ್ ಟ್ರಸ್ಟ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ರಾಜ್ಯಪಾಲನಾಗಿ ಬೆಂಗಳೂರಿನ ಬಂದಾಗಿನಿಂದ ಕನ್ನಡ ಕಲಿಯುವುದಕ್ಕೆ ಶುರು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೇ ವ್ಯವಹರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.