ಮೊದಲು ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟವರಿಗೆ ಪರಿಹಾರ ಕೊಡಿ; ಡಿ.ಕೆ.ಶಿವಕುಮಾರ್
ತೀರ್ಥಹಳ್ಳಿ; ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪನವರ ಹೆಸರಿಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅವರು ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನಾದ್ರೂ ಇಡಲಿ, ಆದರೆ ಜಮೀನು ಕಳೆದುಕೊಂಡವರಿಗೆ ಮೊದಲು ಪರಿಹಾರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಇನ್ನು ವಿಐಎಸ್ಎಲ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ವಿಐಎಸ್ಎಲ್ ವಿಚಾರವಾಗಿ ನಾವು ನಿನ್ನೆ ನೀಡಿರುವ ಹೇಳಿಕೆಗೆ ಬದ್ಧರಾಗಿದ್ದೇವೆ. ಈ ಕಾರ್ಖಾನೆಯನ್ನು ಮುಚ್ಚಬಾರದು, ಸರ್ಕಾರವೇ ನಡೆಸಬೇಕು. ಅವರಿಂದ ಸಾಧ್ಯವಾಗದಿದ್ದರೆ, ನಮ್ಮ ಸರ್ಕಾರ ಬಂದು ಆ ಕೆಲಸ ಮಾಡಲಿದೆ. ಬಿಜೆಪಿಯವರು ಖಾಸಗೀರಣದ ತೀರ್ಮಾನ ಕೈಬಿಟ್ಟು, ಕೇಂದ್ರ ಸಚಿವರು ಕೊಟ್ಟ ಮಾತಿನಂತೆ 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿಸಿ, ನಿಗದಿ ಮಾಡಲಾಗಿರುವ ಗಣಿ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಿ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ನಲ್ಲಿ ನಾಯಕರಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಅಮಿತ್ ಶಾ ಅವರು ಈ ಹಿಂದೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎಂದು ಹೇಳಿದ್ದು, ಇತ್ತೀಚೆಗೆ ಪ್ರಧಾನಿ ನರೇದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದಿದ್ದಾರೆ. ಬಿಜೆಪಿಯವರು ಯಡಿಯೂರಪ್ಪನವರಿಗೆ ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದ್ದು ಯಾಕೆ? ಈ ಬಗ್ಗೆ ಮೊದಲು ಅವರು ಉತ್ತರ ನೀಡಲಿ. ಅವರಿಗೆ 75 ವರ್ಷ ದಾಟಿದ್ದರೂ ಯಡಿಯೂರಪ್ಪನವರ ಮುಖಂಡತ್ವದಲ್ಲಿ ಚುನಾವಣೆ ಮಾಡಿ, ನಂತರ ಆಪರೇಷನ್ ಕಮಲಕ್ಕೆ ಅವಕಾಶ ನೀಡಿ, ನಂತರ ಅವರಿಂದ ಯಾವ ತಪ್ಪಾಗಿತ್ತು ಎಂದು ಅಧಿಕಾರ ಕಿತ್ತುಕೊಂಡಿರಿ? ಎಂದು ಜನರಿಗೆ ಮಾಹಿತಿ ನೀಡಿ’ ಎಂದು ತಿಳಿಸಿದರು.