BengaluruHistoryPolitics

ಉದ್ಘಾಟನೆಯೇ ಆಗದೆ ಕಾರ್ಯಾರಂಭ ಮಾಡಿದ ವಿಧಾನಸೌಧ..!

೨೦೧೭ರಲ್ಲಿ ವಿಧಾನಪರಿಷತ್‌ ಸದಸ್ಯರಾಗಿದ್ದ ಕಾಂಗ್ರೆಸ್‌ ಪಕ್ಷದ ವಿ.ಎಸ್.ಉಗ್ರಪ್ಪ ವಿಧಾನಸೌಧ ಉದ್ಘಾಟನೆಯ ಮಾಹಿತಿ ನೀಡುವಂತೆ ಕೋರಿದ್ದರು. ಅದಕ್ಕೆ ಉತ್ತರ ಒದಗಿಸಿದ್ದ ಸರ್ಕಾರ, ವಿಧಾನಸೌಧ ಉದ್ಘಾಟನೆಯಾಗಿದ್ದರ ಬಗ್ಗೆ ತನ್ನ ಬಳಿ ಮಾಹಿತಿಯೇ ಇಲ್ಲವೆಂದು ಹೇಳಿತ್ತು. ಅಂದು ಉಗ್ರಪ್ಪಗೆ ಸರ್ಕಾರ ನೀಡಿದ್ದ ಲಿಖಿತ ಉತ್ತರದ ಸಾರಾಂಶ ಹೀಗಿದೆ;

ಉಗ್ರಪ್ಪ ಕೇಳಿದ್ದ ಪ್ರಶ್ನೆ:
ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳು ಶಂಕುಸ್ಥಾಪನೆ ಮತ್ತು ಅವುಗಳ ಉದ್ಘಾಟನೆ ಯಾವ ಯಾವ ವರ್ಷದಲ್ಲಿ ಜರುಗಿದೆ; ಆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಹಾಗೂ ಇತರೆ ನಾಯಕರುಗಳು ಯಾರು ಯಾರು; (ಪೂರ್ಣ ವಿವರ ನೀಡುವುದು)

ಇದಕ್ಕೆ ಸರ್ಕಾರದ ಉತ್ತರ:
ವಿಧಾನಸೌಧ ಕಟ್ಟಡದ ಶಂಕುಸ್ಥಾಪನೆಯನ್ನು ಅಂದಿನ ಗೌರವಾನ್ವಿತ ಪ್ರಧಾನಮಂತ್ರಿಗಳಾದ ʻದಿ||ಪಂಡಿತ್‌ ಜವಾಹರ ಲಾಲ್‌ ನೆಹರೂʼರವರು ದಿನಾಂಕ: ೧೩.೦೭.೧೯೫೧ರಂದು ನೆರವೇರಿಸಿರುತ್ತಾರೆ. ಈ ಸಮಯದಲ್ಲಿ ಮಾನ್ಯ ಶ್ರೀ ಕೆ.ಸಿ.ರೆಡ್ಡಿಯವರು ಕರ್ನಾಟಕದ (ಮೈಸೂರು ರಾಜ್ಯ) ಮುಖ್ಯಮಂತ್ರಿಯಾಗಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನಿತರ ನಾಯಕರುಗಳ ಮಾಹಿತಿಯು ಲಭ್ಯವಿರುವುದಿಲ್ಲ.
ವಿಧಾನಸೌಧದ ಕಟ್ಟಡ ನಿರ್ಮಾಣವು ೧೯೫೬ರಲ್ಲಿ ಪೂರ್ಣಗೊಂಡಿದ್ದು, ಆ ಸಮಯದಲ್ಲಿ ಶ್ರೀ ಕಡಿದಾಳ್‌ ಮಂಜಪ್ಪರವರು ಮುಖ್ಯಮಂತ್ರಿಯಾಗಿರುತ್ತಾರೆ. ಈ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಬಗ್ಗೆ ಮಾಹಿತಿಯು ಇರುವುದಿಲ್ಲ.

ಹೌದು, ಸರ್ಕಾರದ ಬಳಿ ವಿಧಾನಸೌಧ ಉದ್ಘಾಟನೆಯಾದ ಬಗ್ಗೆ ಮಾಹಿತಿಯೇ ಇಲ್ಲ. ನಿಜ ಹೇಳಬೇಕೆಂದರೆ ವಿಧಾನಸೌಧದ ಉದ್ಘಾಟನಾ ಕಾರ್ಯಕ್ರಮವೇ ನಡೆದಿಲ್ಲ. ಆತುರಾತುರವಾಗಿ ವಿಧಾನಸೌಧದ ಪ್ರವೇಶ ನಡೆದುಹೋಗಿತ್ತು ಅಷ್ಟೇ. ವಿಧಾನಸೌಧ ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ, ಈ ಭವ್ಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ವಿಶೇಷವಾಗಿ ನಡೆಸಲು ಕೆಂಗಲ್‌ ಹನುಮಂತಯ್ಯ ತೀರ್ಮಾನಿಸಿದ್ದರು. ರಾಜ್ಯದ ಪ್ರತಿಯೊಂದು ಗ್ರಾಮದಿಂದ ಒಬ್ಬ ಪ್ರತಿನಿಧಿಯನ್ನು ಕರೆಸಬೇಕು. ಅವರ ಸಮ್ಮುಖದಲ್ಲಿ ವಿಧಾನಸೌಧ ಉದ್ಘಾಟನೆಯಾಗಬೇಕು ಎಂದು ಬಯಸಿದ್ದರು. ಅದಕ್ಕಾಗಿ ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಅದು ಕೈಗೂಡಲಿಲ್ಲ.

ವಿಧಾನಸೌಧ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ವಪಕ್ಷದವರೇ ಕೆಂಗಲ್‌ ಹನುಮಂತಯ್ಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಇದರಿಂದ ಬೇಸತ್ತ ಕೆಂಗಲ್‌ ಹನುಮಂತಯ್ಯನವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಆಗ ಅಂದರೆ ೧೯೫೬ ಆಗಸ್ಟ್‌ ೧೯ರಂದು ಕಡಿದಾಳ್‌ ಮುಂಜಪ್ಪ ಮುಖ್ಯಮಂತ್ರಿ ಗಾದಿಗೆ ಏರುತ್ತಾರೆ. ಕಡಿದಾಳ್‌ ಮಂಜಪ್ಪ ಕೇವಲ ಎರಡು ತಿಂಗಳಷ್ಟೇ ಅಂದರೆ ಅಕ್ಟೋಬರ್‌ ೩೧ ೧೯೫೬ರವರೆಗೆ ಮುಖ್ಯಮಂತ್ರಿ ಹುದ್ದೆಯಲ್ಲಿರುತ್ತಾರೆ. ಈ ಸಮಯದಲ್ಲೇ ವಿಧಾನಸೌಧದ ಪ್ರವೇಶವಾಗುತ್ತದೆ. ವಿಜಯದಶಮಿ ದಿನ ಸರಳವಾಗಿ ಹೋಮ ನಡೆಸಿ ವಿಧಾನಸೌಧದ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗುತ್ತದೆ.


ಆದರೆ ಕೆಲವರು ಹೇಳುವ ಪ್ರಕಾರ ವಿಧಾನಸೌಧ ಉದ್ಘಾಟನೆಗೆ ದಿನಾಂಕ ನಿಗದಿಯಾಗಿತ್ತಂತೆ. ಆದರೆ ಆ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಲಿಫ್ಟ್‌ ಬಾಯ್‌ ಸಾವನ್ನಪ್ಪುತ್ತಾನೆ. ಈ ಕಾರಣದಿಂದ ಉದ್ಘಾಟನಾ ಕಾರ್ಯಕ್ರಮ ಕ್ಯಾನ್ಸಲ್‌ ಮಾಡಿ, ಕೇವಲ ಹೋಮ, ಹವನಕ್ಕೆ ಸೀಮಿತ ಮಾಡಲಾಯಿತಂತೆ. ಯಾವುದು ನಿಜವೋ, ಯಾವುದು ಸುಳ್ಳೋ ಗೊತ್ತಿಲ್ಲ. ಆದರೆ, ವಿಧಾನಸೌಧ ಉದ್ಘಾಟನೆಯೇ ಆಗದೆ ಕಾರ್ಯಾರಂಭ ಮಾಡಿತು ಎಂಬುದಂತೂ ಸತ್ಯ.

Share Post