ಉಪನ್ಯಾಸಕನ ಅಸಭ್ಯ ವರ್ತನೆ; ಉಪನ್ಯಾಸಕಿಯರಿಂದ ಧರ್ಮದೇಟು
ಬೆಳಗಾವಿ: ಉಪನ್ಯಾಸಕಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಉಪನ್ಯಾಸಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯ ಸರ್ಕಾರಿ ಸರ್ದಾರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಸ್ಟಾಫ್ ರೂಮ್ನಲ್ಲೇ ಉಪನ್ಯಾಸಕಿಯರು ಕಾಲಿನಿಂದ ಒದ್ದು, ಚಪ್ಪಲಿಯಿಂದ ಧರ್ಮದೇಟು ನೀಡಿದ್ದಾರೆ. ಕೆಲ ದಿನದ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಫೋಟೋಗಳು ವೈರಲ್ ಆಗಿವೆ.
ಇಂಗ್ಲಿಷ್ ವಿಭಾಗದ ಉಪನ್ಯಾಸಕ ಅಮಿತ್ ಬಸವಮೂರ್ತಿ ಎಂಬುವವರೇ ಧರ್ಮದೇಟು ತಿಂದವರು. ಇವರು ಉಪನ್ಯಾಸಕಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ದೂರಲಾಗಿದೆ. ಉಪನ್ಯಾಸಕ ಅಮಿತ್ ನಿತ್ಯ ಮದ್ಯ ಸೇವಿಸಿ ಕಾಲೇಜಿಗೆ ಆಗಮಿಸುತ್ತಿರುವುದಲ್ಲದೆ, ಸಹ ಉಪನ್ಯಾಸಕಿಯರ ಜೊತೆ ಅಸಭ್ಯವಾಗಿ ವರ್ತನೆ ತೋರುತ್ತಿದ್ದರು ಎನ್ನಲಾಗ್ತಿದೆ.
ಅಲ್ಲದೇ ಮಹಿಳಾ ಸಿಬ್ಬಂದಿ ಇರುವ ವಿಶ್ರಾಂತಿ ಕೊಠಡಿಗೆ ತೆರಳಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಈ ಹಿನ್ನೆಲೆಯಲ್ಲಿ ಉಪನ್ಯಾಸಕಿಯರು ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ.