ಏಸು ಶಿಲುಬೆ ಮುಂದೆ ಮಗನನ್ನು ಮಲಗಿಸಿ, ಕಾಪಾಡು ದೇವರೇ ಎಂದ ಪೋಷಕರು..!
ಖಾನಾಪುರ; ಮನುಷ್ಯ ಅಸಹಾಯಕತೆ ಸ್ಥಿತಿ ತಲುಪಿದಾಗ ಯಾರು ಏನು ಹೇಳಿದರೂ ಮಾಡುತ್ತಾರೆ ಎಂಬುದಕ್ಕೆ ಈ ಸ್ಟೋರಿ ಉದಾಹರಣೆ. ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಬೆಳೆದಿರುವ ಈ ಕಾಲದಲ್ಲೂ ಮೂಢನಂಬಿಕೆಗೆ ಜನರು ಮನಸೋಲುತ್ತಲೇ ಇದ್ದಾರೆ. ಉತ್ತರ ಕನ್ನಡ ಜಿಲ್ಲೆ ಜೊಯಿಡಾದ ಕೃಷ್ಣ ಸುತ್ರಾವೆ ಹಾಗೂ ಅಂಬಾ ದಂಪತಿಯ 8 ವರ್ಷದ ಪುತ್ರ ಶೈಲೇಶ್ ಮಿದುಳು ಜ್ವರದಿಂದ ಬಳಲುತ್ತಿದ್ದು, ಇದರಿಂದಾಗಿ ಪಾರ್ಶ್ವವಾಯು ಪೀಡಿತನಾಗಿದ್ದಾನೆ. ಇದರ ಚಿಕಿತ್ಸೆಗಾಗಿ ದಂಪತಿ ಸುತ್ತಿದ ಆಸ್ಪತ್ರೆಗಳಿಲ್ಲ. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. ಆದ್ರೆ ಬಾಲಕನ ಆರೋಗ್ಯ ಕ್ಷೀಣಿಸಿದ್ದರಿಂದ, ಬಾಲಕ ಬದುಕೋದಿಲ್ಲ ಎಂದು ವೈದ್ಯರು ಕೈಚೆಲ್ಲಿಬಿಟ್ಟಿದ್ದಾರೆ. ಇದರಿಂದ ದಿಕ್ಕುತೋಚದಂತಾದ ದಂಪತಿ ತಮ್ಮ ಪುತ್ರವನ್ನು ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದಲ್ಲಿರುವ ಏಸುಕ್ರಿಸ್ತನ ಶಿಲುಬೆ ಬಳಿ ಇಟ್ಟು, ಕಾಪಾಡುವಂತೆ ಮೊರೆ ಇಟ್ಟಿದ್ದಾರೆ.
ನಂದಗಡ ಗ್ರಾಮದ ಬಳಿಯ ಬೆಟ್ಟದ ಮೇಲಿರುವ ಏಸು ಕ್ರಿಸ್ತನ ಶಿಲುಬೆಯ ಮುಂದೆ ಪ್ರಾರ್ಥಿಸಿದರೆ ಮಗ ಬದುಕುತ್ತಾನೆ ಎಂದು ಮಿತ್ರರೊಬ್ಬರು ಹೇಳಿದ್ದರಂತೆ. ಅದನ್ನು ನಂಬಿ ಈ ದಂಪತಿ ಮಗುವಿನೊಂದಿಗೆ ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿದ್ದಾರೆ. ಬಾಲಕನ ಸ್ಥಿತಿಗೆ ಮಮ್ಮಲ ಮರುಗಿದ ಗ್ರಾಮಸ್ಥರು ಕೂಡ ಏಸುವಿನ ಬಳಿ ಪ್ರಾರ್ಥನೆ ಸಲ್ಲಿಸಿದರು. ನಂದಗಡ ಬೆಟ್ಟದಲ್ಲಿರುವ ಶಿಲುಬೆ ಐತಿಹಾಸಿಕ ಮಹತ್ವ ಪಡೆದಿದೆ. 1920ರಲ್ಲಿ ಪ್ಲೇಗ್ ಬಂದಾಗ ಪಾದ್ರಿಯೊಬ್ಬರು ಜನರನ್ನು ಇದೇ ಶಿಲುಬೆ ಇರುವ ಬೆಟ್ಟದ ಮೇಲೆ ಕರೆತಂದು ಸಾಮೂಹಿಕ ಪ್ರಾರ್ಥನೆ ನಡೆಸಿದ್ದರು. ಆ ಪ್ರಾರ್ಥನೆ ಫಲಿಸಿತು ಎಂಬ ಮಾತು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದು ಬಂದಿದೆ. ಹೀಗಾಗಿ, ಪ್ರತಿ ವರ್ಷ ಹಲವರು ತಮ್ಮ ಹರಕೆಗೆ ಇಲ್ಲಿಗೆ ಬರುವುದು ರೂಢಿ.