National

ರಾಷ್ಟ್ರಪತಿ ಚುನಾವಣೆ; ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ

ನವದೆಹಲಿ; ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವ ಎನ್‌ಡಿಎ ಮೈತ್ರಿಕೂಟ ಅಚ್ಚರಿ ಅಭ್ಯರ್ಥಿಯನ್ನು ಆಯ್ಕೆ  ಮಾಡಿದೆ. ಜಾರ್ಖಂಡ್​ ಮಾಜಿ ರಾಜ್ಯಪಾಲರು, ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಸಂಜೆಯತನಕ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಅಚ್ಚರಿ ಅಚ್ಚರಿ ಎಂಬಂತೆ ದ್ರೌಪದಿಯವರನ್ನು ಆಯ್ಕೆ ಮಾಡಲಾಗಿದೆ. ದ್ರೌಪದಿ ಮುರ್ಮು ಅವರು ಜೂನ್ 25 ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತಾಗಿ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಸಂಸದೀಯ ಮಂಡಳಿಯ ಸಭೆಯಲ್ಲಿ ಒಮ್ಮತದಿಂದ ದ್ರೌಪದಿ ಮುರ್ಮು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಂಸದೀಯ ಮಂಡಳಿಯ ಇತರ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ಹೆಸರನ್ನು ಸೂಚಿಸಲಾಗಿದೆ.

ಯಾರು ಈ ದ್ರೌಪದಿ ಮರ್ಮು..?

ದ್ರೌಪದಿ ಮುರ್ಮು ಜೂನ್ 20, 1958 ರಂದು ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಬೈದಪೋಸಿಯಲ್ಲಿ ಜನಿಸಿದರು. ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಅವರು 2000-2004ರಲ್ಲಿ ಒಡಿಶಾ ವಿಧಾನಸಭೆಯಲ್ಲಿ ಸಚಿವರಾಗಿದ್ದರು. ನಂತರ ಅವರು ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.
ಒಡಿಶಾದಲ್ಲಿ ಭಾರತೀಯ ಜನತಾ ಪಕ್ಷದ ಬಿಜು ಜನತಾ ದಳದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅವರು ಮಾರ್ಚ್ 6, 2000 ರಿಂದ ಆಗಸ್ಟ್ 6, 2002 ರವರೆಗೆ ವಾಣಿಜ್ಯ ಮತ್ತು ಸಾರಿಗೆ ರಾಜ್ಯ ಸಚಿವರಾಗಿದ್ದರು. ಆಗಸ್ಟ್ 6, 2002 ರಿಂದ ಮೇ 2004 ರವರೆಗೆ ಮೀನುಗಾರಿಕೆ ಮತ್ತು ಪಶು ಸಂಪನ್ಮೂಲಗಳ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ರಾಯ್ಗಢದಲ್ಲಿ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾಗಿದ್ದರು.
ಕಳೆದ ಬಾರಿಯೇ ದ್ರೌಪದಿ ಮರ್ಮು ಅವರ ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಬಲವಾಗಿ ಕೇಳಿಬಂದಿತ್ತು. ಆದ್ರೆ ಈ ಬಾರಿ ಅವರನ್ನು ಎನ್‌ಡಿಎ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಇದರಿಂದಾಗಿ ರಾಷ್ಟ್ರಪತಿ ಅಭ್ಯರ್ಥಿಯಾಗುತ್ತಿರುವ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ದ್ರೌಪದಿ ಮುರ್ಮು ತನ್ನ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಬಡವರು, ದೀನ ದಲಿತರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಆಕೆಗೆ ವಿಶೇಷ ಆಡಳಿತ ಅನುಭವವಿದೆ. ದ್ರೌಪದಿ ಮುರ್ಮು ನಮ್ಮ ದೇಶಕ್ಕೆ ಶ್ರೇಷ್ಠ ರಾಷ್ಟ್ರಪತಿಯಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Share Post