CrimeDistricts

ನ್ಯಾಯಬೆಲೆ ಅಂಗಡಿ ಅವ್ಯವಹಾರ ವಿಚಾರವಾಗಿ ಸಿಗದ ನ್ಯಾಯ; ಸಾಲುಮರದ ವೀರಾಚಾರಿ ಆತ್ಮಹತ್ಯೆ

ದಾವಣಗೆರೆ; 3000ಕ್ಕೂ ಹೆಚ್ಚು ಸಾಲುಮರಗಳನ್ನು ಬೆಳೆಸಿದ್ದ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ ಅವರು ಮಿಟ್ಲಕಟ್ಟೆಯಲ್ಲಿ ಕಳೆದ ರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿನ ಅವ್ಯವಹಾರ ವಿಚಾರವಾಗಿ ಕೋರ್ಟ್‌ನಲ್ಲೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮನನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಮಿಟ್ಲಕಟ್ಟೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿದ್ದ ಅವ್ಯವಹಾರದ ವಿರುದ್ಧ ವೀರಾಚಾರಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅವರಿಗೆ ನ್ಯಾಯ ಸಿಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ವೀರಾಚಾರಿ ಅವರು ಶಾಮನೂರಿನಿಂದ ಮಿಟ್ಲಕಟ್ಟೆಯವರೆಗೂ ಮರಗಳನ್ನು ಬೆಳೆಸಿ ಅವುಗಳನ್ನು ಪೋಷಿಸುತ್ತಾ ಬಂದಿದ್ದರು. ಶಾಲೆಗಳು, ಉದ್ಯಾನ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳ ಬಳಿ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸುತ್ತಿದ್ದರು. ಸ್ವಂತ ಆಟೋದಲ್ಲಿ ಧ್ವನಿವರ್ಧಕದಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದರು. ಇವರ ಸೇವೆಯನ್ನು ಗುರುತಿಸಿ ರಾಜ್ಯಸರ್ಕಾರ 1999-2000ರ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

Share Post